ಡಿ.14ರಂದು ಗಂಟೆಗೆ ಸುಮಾರು 120ರಷ್ಟು ಉಲ್ಕೆಗಳು ಗೋಚರ

ಉಡುಪಿ: ಡಿ.14ರಂದು(ನಾಳೆ) ಗಂಟೆಗೆ ಸುಮಾರು 120ರಷ್ಟು ಉಲ್ಕೆಗಳು ಗೋಚರಿಸಲಿದ್ದು, ಶುಭ್ರ ಆಕಾಶದಲ್ಲಿ ಪ್ರತಿ 30 ಸೆಕೆಂಡುಗಳಿಗೊಮ್ಮೆ ಕಾಣುವ ಈ ಉಲ್ಕಾಪಾತವು ಖಗೋಳಾಸಕ್ತರಿಗೆ ವರದಾನವಾಗಿದೆ.
ಧೂಮಕೇತುವು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಸೂರ್ಯನ ಶಾಖದಿಂದಾಗಿ ಅದರ ಅವಶೇಷಗಳು ತನ್ನ ಪಥದಲ್ಲಿ ಉಳಿಯುತ್ತವೆ. ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತಾ ಈ ಪ್ರದೇಶವನ್ನು ತಲುಪಿದಾಗ ಆ ಅವಶೇಷಗಳು ಭೂಮಿಯ ವಾತಾವರಣದಲ್ಲಿ ಉಲ್ಕೆಗಳಾಗಿ ಗೋಚರಿಸುತ್ತವೆ.
ಭೂಮಿಯು ಈ ಪ್ರದೇಶವನ್ನು, ವರ್ಷಕ್ಕೆ ಒಂದು ಬಾರಿ ಮಾತ್ರ ಹಾದು ಹೋಗುವುದರಿಂದ ಪ್ರತಿವರ್ಷ ನಿರ್ದಿಷ್ಟ ಅವಧಿಯಲ್ಲಿ ಉಲ್ಕಾವೃಷ್ಟಿಯಾಗುತ್ತದೆ. ಉದಾಹರಣೆಗೆ, ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಭೂಮಿಯು ಟೆಂಪಲ್- ಟಟ್ಟಲ್ ಧೂಮಕೇತುವಿನ ಪಥವನ್ನು ಹಾದು ಹೋಗುವಾಗ ಸಿಂಹರಾಶಿಯಿಂದ ಲಿಯೊನಿಡ್ ಉಲ್ಕಾವೃಷ್ಟಿಯು ಗೋಚರಿಸುತ್ತದೆ.
ಆದರೆ ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್ ಉಲ್ಕಾವೃಷ್ಟಿಯು 3200 ಫೆಥನ್ ಎಂಬ ಒಂದು ಕ್ಷುದ್ರ ಗ್ರಹದಿಂದ ಉಧ್ಭವಿಸುತ್ತದೆ. ಈ ಕ್ಷುದ್ರ ಗ್ರಹದ ಅವಶೇಷಗಳು ತುಂಬಾ ಹೆಚ್ಚಾಗಿರುವುದರಿಂದ ಜೆಮಿನಿಡ್ ಉಲ್ಕಾವೃಷ್ಟಿ ಒಂದು ಕುತೂಹಲಕಾರಿ ವಿದ್ಯಮಾನವಾಗಿದೆ.
ಡಿ.14ರಂದು ಈ ವಿದ್ಯಮಾನದ ಸೌಂದರ್ಯವನ್ನು ವೀಕ್ಷಿಸಲು ಕತ್ತಲಿನ ಪ್ರದೇಶ ಅತಿ ಸೂಕ್ತವಾದುದು. ರಾತ್ರಿ 9ಗಂಟೆ ಸುಮಾರಿಗೆ ಪೂರ್ವ-ಕ್ಷಿತಿಜದಿಂದ ಮಿಥುನ ರಾಶಿಯು ಉದಯವಾಗುತ್ತದೆ. ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾ ಕೃತಿಯನ್ನು ಗುರುತಿಸಬಹುದು.
ಇದೇ ದಿಕ್ಕಿನ ಸ್ವಲ್ಪಮೇಲ್ಭಾಗದಲ್ಲಿ ಪಂಚಕೋನಾ ಕೃತಿಯನ್ನು ಗುರುತಿಸಬಹುದು. ಇದೇ ವಿಜಯ ಸಾರಥಿ ನಕ್ಷತ್ರಪುಂಜ. ಈ ನಕ್ಷತ್ರ ಪುಂಜದಲ್ಲಿ ಅತೀ ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ. ಈ ನಕ್ಷತ್ರದ ಮೇಲಿನಿಂದ ಜೆಮಿನಿಡ್ ಉಲ್ಕಾವೃಷ್ಟಿ ಉಧ್ಭವಿಸುವುದನ್ನು ರಾತ್ರಿ 9ರಿಂದ ಸೂರ್ಯೋದಯದವರೆಗೆ ಕಾಣಬಹುದು. ಅದರಲ್ಲೂ ಇದನ್ನು ವೀಕ್ಷಿಸಲು ಇನ್ನೂ ಸೂಕ್ತವಾದ ಸಮಯ ರಾತ್ರಿ 1 ಗಂಟೆಯಿಂದ ಮುಂಜಾನೆ 4 ಗಂಟೆಯ ವರೆಗಿನ ಅವಧಿ. ಯಾಕೆಂದರೆ, ಈ ಅವಧಿಯಲ್ಲಿ ನಕ್ಷತ್ರ ಪುಂಜವು ಕ್ಷಿತಿಜದಿಂದ ತುಂಬಾ ಮೇಲೆ ಕಾಣುವುದರಿಂದ ಈ ಸಮಯದಲ್ಲಿ ಹೆಚ್ಚು ಉಲ್ಕೆಗಳನ್ನು ವೀಕ್ಷಿಸಿ ಆನಂದಿಸಬಹುದು ಎಂದು ಉಡುಪಿ ಪೂರ್ಣ ಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.







