ಬಿಪಿನ್ ರಾವತ್, ಪುನೀತ್ ರಾಜ್‍ಕುಮಾರ್ ಸಹಿತ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

ಬೆಳಗಾವಿ , ಡಿ. 13: ಇತ್ತಿಚೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಬಿಪಿನ್ ರಾವತ್, ನಟ ಪುನೀತ್ ರಾಜ್‍ಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಉರಿಮಜಲು ಗ್ರಾಮದ ಕೆ.ರಾಮಭಟ್ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸೋಮವಾರ ಬೆಳಗ್ಗೆ ನಿಗದಿ ಅವಧಿಗೆ ವಂದೆಮಾತರಂ ಗೀತೆಯೊಂದಿಗೆ ಆರಂಭವಾದ ವಿಧಾನ ಮಂಡಲ ಉಭಯ ಸದನಗಳಲ್ಲಿ ಸ್ಪೀಕರ್ ಹಾಗೂ ಸಭಾಪತಿ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಅಗಲಿದ ಗಣ್ಯರನ್ನು ಸದನಕ್ಕೆ ತಿಳಿಸಿದರು.
ಮಾಜಿ ರಾಜ್ಯಪಾಲ ಕೆ.ರೋಸಯ್ಯ, ಮಾಜಿ ಸಚಿವರಾದ ಎಸ್.ಆರ್. ಮೋರೆ, ವಿರೂಪಾಕ್ಷಪ್ಪ ಅಂಗಡಿ, ಮಾಜಿ ಸದಸ್ಯ ಡಾ. ಎಂ.ಪಿ.ಕರ್ಕಿ, ನಟ ಶಿವರಾಂ ಹಾಗೂ ವಿದ್ವಾಂಸ ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಅವರ ನಿಧನವನ್ನು ಸದನಕ್ಕೆ ತಿಳಿಸಿದರು.
ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‍ನ ಉಪ ನಾಯಕ ಬಂಡೆಪ್ಪ ಕಾಶೆಂಪೂರ್, ಮಾಜಿ ಸಿಎಂ ಯಡಿಯೂರಪ್ಪ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿ ಇನ್ನಿತರ ಸದಸ್ಯರು ಅಗಲಿದ ಗಣ್ಯರನ್ನು ಸ್ಮರಿಸಿದರು. ಆ ಬಳಿಕ ಉಭಯ ಸದನಗಳಲ್ಲಿ ಒಚಿದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸದಸ್ಯರ ಗೈರು: ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಂಡ ಮಹತ್ವದ ಅಧಿವೇಶನಕ್ಕೆ ಆಡಳಿತ ಹಾಗೂ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್‍ನ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊರತುಪಡಿಸಿದರೆ ಹಲವು ಸದಸ್ಯರು ಗೈರು ಹಾಜರಾಗಿದ್ದು, ಸದಸ್ಯರ ಗೈರು ಉಭಯ ಸದನಗಳಲ್ಲಿ ಎದ್ದು ಕಾಣುತ್ತಿತ್ತು.







