ಎಸ್ಸಿ/ಎಸ್ಟಿಗಳ ಮೇಲೆ ದೌರ್ಜನ್ಯಗಳ ವಿರುದ್ಧ ರಾಷ್ಟ್ರೀಯ ಸಹಾಯವಾಣಿಗೆ ಚಾಲನೆ

ಸಚಿವ ಡಾ.ವೀರೇಂದ್ರ ಕುಮಾರ(photo:twitter/@Drvirendrakum13)
ಹೊಸದಿಲ್ಲಿ,ಡಿ.13: ಕೇಂದ್ರ ಸಹಾಯಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ ಅವರು ಸೋಮವಾರ ಎಸ್ಸಿ/ಎಸ್ಟಿಗಳ ಮೇಲೆ ದೌರ್ಜನ್ಯಗಳ ವಿರುದ್ಧ ರಾಷ್ಟ್ರೀಯ ಸಹಾಯವಾಣಿಗೆ ಚಾಲನೆ ನೀಡಿದರು.
ತಾರತಮ್ಯವನ್ನು ಕೊನೆಗಾಣಿಸಿ ಎಲ್ಲರಿಗೂ ರಕ್ಷಣೆಯನ್ನೊದಗಿಸುವ ಉದ್ಧೇಶವನ್ನು ಹೊಂದಿರುವ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ ವಿರುದ್ಧ ದೌರ್ಜನ್ಯ (ತಡೆ) ಕಾಯ್ದೆಯ ನಿಬಂಧನೆಗಳ ಬಗ್ಗೆ ಜನಜಾಗ್ರತಿಯನ್ನು ಮೂಡಿಸುವ ಗುರಿಯನ್ನು ಸಹಾಯವಾಣಿಯು ಹೊಂದಿದೆ. ಮೊಬೈಲ್ ಅಥವಾ ಸ್ಥಿರ ದೂರವಾಣಿಯಿಂದ ಉಚಿತ ಕರೆ ಸಂಖ್ಯೆ 14566ರ ಮೂಲಕ ಸಂಪರ್ಕಿಸಬಹುದಾದ ಸಹಾಯವಾಣಿಯು ದಿನದ 24 ಗಂಟೆಯೂ ಹಿಂದಿ,ಇಂಗ್ಲಿಷ್ಗಳಲ್ಲಿ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ ಎಂದು ವರದಿಯು ತಿಳಿಸಿದೆ.
ಸಹಾಯವಾಣಿಗೆ ಬರುವ ಪ್ರತಿ ದೂರನ್ನೂ ಎಫ್ಐಆರ್ನ್ನಾಗಿ ನೋಂದಾಯಿಸಿಕೊಳ್ಳಲಾಗುವುದು ಎಂದು ಡಾ.ವೀರೇಂದ್ರ ಕುಮಾರ ತಿಳಿಸಿದರು.
ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ,1955 ಮತ್ತು ದೌರ್ಜನ್ಯಗಳ ತಡೆ ಕಾಯ್ದೆ,1989ರ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರು/ದೂರುದಾರರು/ಎನ್ಜಿಒಗಳು ಸಲ್ಲಿಸುವ ಪ್ರತಿ ದೂರಿಗೂ ಡಾಕೆಟ್ ನಂಬರ್ ನೀಡಲಾಗುವುದು. ದೂರುದಾರರು ಮತ್ತು ಎನ್ಜಿಒಗಳು ಈ ನಂಬರ್ ಅನ್ನು ಬಳಸಿ ಆನ್ಲೈನ್ನಲ್ಲಿ ದೂರಿನ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು.







