ಮತಾಂತರ ನಿಷೇಧ ಮಸೂದೆ ಸಹಿತ ಹತ್ತು ವಿಧೇಯಕಗಳ ಮಂಡನೆಗೆ ಸರಕಾರದ ಸಿದ್ಧತೆ

ಬೆಳಗಾವಿ, ಡಿ. 13: ವಿಧಾನ ಮಂಡಲ ಚಳಿಗಾಲದ ಅಧಿವೇಶನವನ್ನು ಒಟ್ಟು 10 ದಿನಗಳ ಕಾಲ ನಡೆಸಲು ತೀರ್ಮಾನಿಸಿದ್ದು, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಹತ್ತಕ್ಕೂ ಹೆಚ್ಚು ಮಹತ್ವ ವಿಧೇಯಕಗಳನ್ನು ಮಂಡಿಸಲು ಸರಕಾರ ಸಿದ್ಧತೆ ನಡೆಸಿದೆ.
ಸೋಮವಾರ ಇಲ್ಲಿನ ಸುವರ್ಣವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಭಾನಾಯಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ 10 ದಿನಗಳ ಕಾಲ ವಿಧಾನಸಭೆ ಕಲಾಪ ನಡೆಸಲು ನಿರ್ಧರಿಸಲಾಗಿದೆ.
ಅವಧಿ ವಿಸ್ತರಣೆಗೆ ಒತ್ತಾಯ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಡಿಸೆಂಬರ್ ಅಂತ್ಯದ ವರೆಗೆ ಅಧಿವೇಶನ ಕಲಾಪದ ಅವಧಿ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರ, ಅದು ಸದ್ಯಕ್ಕೆ ಸಾಧ್ಯವಿಲ್ಲ, ನಿಗದಿಯಂತೆ ಹತ್ತು ದಿನಗಳ ಕಾಲ ಅಧಿವೇಶನ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಎರಡು ದಿನ ಮೀಸಲಿಡಲು ತೀರ್ಮಾನಿಸಲಾಗಿದೆ. ಕೃಷ್ಣಾ, ಮಹದಾಯಿ ಸೇರಿ ಉತ್ತರ ಭಾಗದ ಸಮಸ್ಯೆಗಳ ಸಂಬಂಧ ಚರ್ಚಿಸಿ ಅವುಗಳಿಗೆ ಸೂಕ್ತ ಪರಿಹಾರ ಮಾರ್ಗೋಪಾಯಗಳನ್ನು ಕಂಡುಹಿಡಿಯಲಾಗುವುದು ಎಂದು ಸ್ಪೀಕರ್ ಪ್ರಕಟಿಸಿದ್ದಾರೆ.
ಈ ಅಧಿವೇಶನದಲ್ಲಿ ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ, ಮತಾಂತರ ನಿಷೇಧ ಕಾನೂನು, ಕರ್ನಾಟಕ ಭೂ ಕಂದಾಯ(ತಿದ್ದುಪಡಿ)ವಿಧೇಯಕ, ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ, ಕರ್ನಾಟಕ ಮಹಾನಗರ ಪಾಲಿಕೆಗಳು ಮತ್ತು ಇತರೆ ಕಾನೂನು(ಮೂರನೆ ತಿದ್ದುಪಡಿ) ವಿಧೇಯಕ ಸ್ಭೆರಿದಂತೆ ಹತ್ತು ಮಸೂದೆಗಳನ್ನು ಮಂಡಿಸಲು ಸರಕಾರ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.







