ಸೋವಿಯಟ್ ಒಕ್ಕೂಟ ಪತನದ ಬಳಿಕ ಜೀವನ ನಿರ್ವಹಣೆಗೆ ಟ್ಯಾಕ್ಸಿ ಚಲಾಯಿಸುತ್ತಿದ್ದೆ: ವ್ಲಾದಿಮಿರ್ ಪುಟಿನ್

ವ್ಲಾದಿಮಿರ್ ಪುಟಿನ್
ಮಾಸ್ಕೊ, ಡಿ.13: ಸೋವಿಯಟ್ ಯೂನಿಯನ್ ನ ಪತನವು ಐತಿಹಾಸಿಕ ರಶ್ಯಾದ ಅಂತ್ಯಕ್ಕೆ ನಾಂದಿ ಹಾಡಿತು. ಸೋವಿಯಟ್ ಯೂನಿಯನ್ ಪತನ ಬಹುತೇಕ ಪ್ರಜೆಗಳಿಗೆ ದುರಂತವಾಗಿ ಪರಿಣಮಿಸಿದ್ದು ತಾನು ಜೀವನ ನಿರ್ವಹಣೆಗೆ ಟ್ಯಾಕ್ಸಿ ಚಲಾಯಿಸುವ ಕೆಲಸ ಮಾಡುತ್ತಿದ್ದೆ ಎಂದು ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಚಾನೆಲ್ ಒನ್ನಲ್ಲಿ ಪ್ರಸಾರವಾಗಲಿರುವ ‘ರೀಸೆಂಟ್ ಹಿಸ್ಟರಿ’ ಸಾಕ್ಷ್ಯಚಿತ್ರದಲ್ಲಿ ಪುಟಿನ್ ಸೋವಿಯತ್ ಯೂನಿಯನ್ ಪತನದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಒಕ್ಕೂಟ ಪತನದ ಬಳಿಕ ಕುಟುಂಬ ನಿರ್ವಹಣೆಗೆ ಹೆಚ್ಚಿನ ಹಣದ ಅಗತ್ಯಬಿದ್ದಾಗ ಟ್ಯಾಕ್ಸಿ ಚಲಾಯಿಸುತ್ತಿದ್ದೆ. ಈ ಬಗ್ಗೆ ಈಗ ಮಾತನಾಡುವುದು ಅಹಿತಕರವಾಗಿದ್ದರೂ, ದುರದೃಷ್ಟವಶಾತ್ ಅದು ವಾಸ್ತವ ವಿಷಯವಾಗಿದೆ ಎಂದು ಪುಟಿನ್ ನೆನಪಿಸಿಕೊಂಡಿದ್ದಾರೆ.
ರಶ್ಯಾವು ಸೋವಿಯಟ್ ಯೂನಿಯನ್ನ ಕೇಂದ್ರವಾಗಿತ್ತು ಮತ್ತು ಈ ಒಕ್ಕೂಟದಡಿ 15 ಗಣರಾಜ್ಯಗಳಿದ್ದವು. 1991ರಲ್ಲಿ ಆರ್ಥಿಕ ಹೊರೆಯಿಂದಾಗಿ ಒಕ್ಕೂಟ ಕುಸಿದುಬಿದ್ದಾಗ ರಶ್ಯಾ ಸ್ವತಂತ್ರ ದೇಶವಾಯಿತು. ಆಗ ಸೋವಿಯಟ್ ಯೂನಿಯನ್ನ ಗುಪ್ತಚರ ವಿಭಾಗ ಕೆಜಿಬಿಯ ಉದ್ಯೋಗಿಯಾಗಿದ್ದರು ಪುಟಿನ್. ಸೋವಿಯಟ್ ಯೂನಿಯನ್ನ ಪತನ 20ನೇ ಶತಮಾನದ ಅತೀ ದೊಡ್ಡ ಭೌಗೋಳಿಕ ರಾಜಕೀಯ ದುರಂತವಾಗಿದೆ ಎಂದು ಈ ಹಿಂದೆಯೂ ಪುಟಿನ್ ಪ್ರತಿಕ್ರಿಯಿಸಿದ್ದರು.
ಈ ಹಿಂದಿನ ಸೋವಿಯಟ್ ಒಕ್ಕೂಟದಡಿ ಇದ್ದ ದೇಶಗಳ ಜತೆ ಮಿಲಿಟರಿ ಮಹಾತ್ವಾಕಾಂಕ್ಷೆಯ ಉದ್ದೇಶದಿಂದ ಪಾಶ್ಚಿಮಾತ್ಯ ದೇಶಗಳು ನಿಕಟ ಸಂಪರ್ಕ ಸಾಧಿಸುತ್ತಿರುವ ಬಗ್ಗೆ ಪುಟಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಜಾರ್ಜಿಯಾ ಮತ್ತು ಉಕ್ರೇನ್ನೊಂದಿಗೆ ಸಂಬಂಧ ಸಾಧಿಸುವ ಬಗ್ಗೆ 2008ರಲ್ಲಿ ನೇಟೋ ಕೈಗೊಂಡಿರುವ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.







