ತರಬೇತಿ ಆಯೋಜನೆಗೆ ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು ಡಿ.13: ಹದಿಹರೆಯದ ಹೆಣ್ಣುಮಕ್ಕಳು ಆರೋಗ್ಯವಂತರಾಗಿರಲು ಅನುಕೂಲವಾಗುವಂತಹ ತರಬೇತಿಯನ್ನು ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಇಂಡಿಪೆಂಡೆಂಟ್ ಸ್ಪೆಷಲ್‌ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹದಿಹರೆಯದ ಹೆಣ್ಣುಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವ ಬಗ್ಗೆ ಅರ್ಹ ಶಿಕ್ಷಕರು ಆಯಾ ಶಾಲೆಗಳಲ್ಲಿಯೇ ತರಬೇತಿ ನೀಡಬೇಕು. ಅದಕ್ಕಾಗಿ ಜಿಲ್ಲಾದ್ಯಂತ ಆಯ್ಕೆ ಮಾಡಲಾದ 400ಕ್ಕೂ ಅಧಿಕ ಅರ್ಹ ಶಿಕ್ಷಕರಿಗೆ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ತರಬೇತಿಯನ್ನು ಜನವರಿಯಿಂದ ಹಮ್ಮಿಕೊಳ್ಳುವಂತೆ ಡಿಸಿ ನಿರ್ದೇಶನ ನೀಡಿದರು.
ಮಹಿಳೆ, ಮಕ್ಕಳು, ಪುಟಾಣಿಗಳ ಆರೋಗ್ಯ ಸಂಬಂಧಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸ್ಥಳೀಯ ಸಂಘ-ಸಂಸ್ಥೆಗಳ ನೆರವು ಪಡೆಯಬೇಕು, ಅಂಗನವಾಡಿ, ಕಾರ್ಯಕರ್ತೆಯರಿಗೆ ಮಾಸ್ಕ್, ಗ್ಲೌಸ್ ವಿತರಿಸಬೇಕು. ತಾಲೂಕು ಮಟ್ಟದಲ್ಲಿ ಆಗಾಗ್ಯೆ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವಿಕಲಚೇತನ ಮಕ್ಕಳ ಉಪಯೋಗಕ್ಕಾಗಿ ಮಕ್ಕಳ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲು ಜಿಪಂ ಸಿಇಒ ಅವರೊಂದಿಗೆ ಚರ್ಚಿಸುವಂತೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಸೌಲಭ್ಯಗಳು ಹಾಗೂ ಪರಿಕರಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಶಿಕ್ಷಣ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







