ಪ್ರಜ್ವಲ್ ರೇವಣ್ಣ ಪ್ರಕರಣ: ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್

ಫೈಲ್ ಚಿತ್ರ- ಪ್ರಜ್ವಲ್ ರೇವಣ್ಣ
ಹೊಸದಿಲ್ಲಿ: ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಜಂಟಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ನಾಯಕ ಎ. ಮಂಜು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ಅವರು ತಮ್ಮ ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಸಂಪೂರ್ಣ ಆಸ್ತಿಯನ್ನು ಬಹಿರಂಗಪಡಿಸದೆ ಭ್ರಷ್ಟ ಚಟುವಟಿಕೆಗಳನ್ನು ಆಶ್ರಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಎಂ.ಎಂ. ಸುಂದ್ರೇಶ್ ಅವರನ್ನೊಳಗೊಂಡ ಪೀಠವು ಜನವರಿ 17, 2020 ರ ಹೈಕೋರ್ಟ್ನ ತೀರ್ಪನ್ನು ತಳ್ಳಿಹಾಕಿತು.
"ನಿಯಮಗಳ ಉಲ್ಲಂಘನೆಯನ್ನು ಪ್ರಜ್ವಲ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ವಿಚಾರಣೆಯ ವಿಷಯವಾಗಿದೆ. ಆದರೆ ಖಂಡಿತವಾಗಿಯೂ ಇದನ್ನು ಮುಚ್ಚಬೇಕಾದ ವಿಷಯವಲ್ಲ ಎಂದಿರುವ ಸುಪ್ರೀಂಕೋರ್ಟ್, ಚುನಾವಣೆ ಮುಗಿದು ಎರಡೂವರೆ ವರ್ಷಗಳು ಕಳೆದಿರುವುದರಿಂದ ಈ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಹೈಕೋರ್ಟ್ಗೆ ಸೂಚಿಸಿದೆ.
15 ದಿನಗಳೊಳಗೆ ಸೂಕ್ತ ಅಫಿಡವಿಟ್ ಸಲ್ಲಿಸಲು ಮಂಜು ಅವರಿಗೆ ನ್ಯಾಯಾಲಯ ಅನುಮತಿ ನೀಡಿದೆ.