ನಕಲಿ ಅಂಕಪಟ್ಟಿಯಿಂದ ಯಾವುದೇ ರೀತಿಯ ಹುದ್ದೆ ಹೊಂದಿದ್ದರೆ ಕ್ರಮ: ಸಚಿವ ಅಶ್ವತ್ಥನಾರಾಯಣ

ಬೆಳಗಾವಿ, ಡಿ.13: ನಕಲಿ ಅಂಕಪಟ್ಟಿ ಮೂಲಕ ಯಾವುದೇ ರೀತಿಯ ಹುದ್ದೆ ಪಡೆದುಕೊಂಡಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.
ಸೋಮವಾರ ಪರಿಷತ್‍ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ವಿಶ್ವವಿದ್ಯಾಲಯ ಯಾವುದೇ ರೀತಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಪದವಿ ಪ್ರದಾನ ಮಾಡಿಲ್ಲ. ಹಾಗಾಗಿ ವಿವಿ ಅಧಿಕಾರಿಗಳ ವಿರುದ್ಧ ನಕಲಿ ಅಂಕಪಟ್ಟಿ ಪ್ರಕರಣ ಸಂಬಂಧ ಯಾವುದೇ ರೀತಿಯ ಕ್ರಮವಿಲ್ಲ. ಆದರೆ, ನಕಲಿ ಅಂಕಪಟ್ಟಿ ನೀಡಿ ಹುದ್ದೆ ಗಿಟ್ಟಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೊರಗೆ ಖಾಸಗಿಯಲ್ಲಿ ನೇಮಕಾತಿ ವೇಳೆ ಅಂಕಪಟ್ಟಿ ನಕಲಿ ಮಾಡಲಾಗಿದೆ. ವಿಶ್ವವಿದ್ಯಾಲಯದ ಪರಿಶೀಲನೆಗೆ ಕಳಿಸಿದಾಗ ಬೆಳಕಿಗೆ ಬಂದಿದೆ. ಪತ್ತೆಯಾಗುತ್ತಿದ್ದಂತೆ ದೂರು ದಾಖಲಿಸಿದ್ದು, ತನಿಖೆ ನಡೆಯಿತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇದಕ್ಕೂ ಮೊದಲು ಬಿ.ಕೆ.ಹರಿಪ್ರಸಾದ್ ಮಾತನಾಡಿ, ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಶಾಸಕರು, ಸಚಿವರು, ಕೇಂದ್ರ ಸಚಿವರು ಕೂಡ ನಕಲಿ ಅಂಕಪಟ್ಟಿ ಪಡೆದಿದ್ದಾರೆ. ಬೇಕಾದರೆ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ಪಟ್ಟಿ ಇದ್ದರೆ ಹೇಳಬಹುದು ಎಂದು ಹರಿಪ್ರಸಾದ್ ಅವರಿಗೆ ಸವಾಲು ಹಾಕಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಹೊರಟ್ಟಿ, ಸದನದ ಹೊರಗೆ ಇದ್ದ ನಕಲಿ ಅಂಕಪಟ್ಟಿ ವಿವಾದ ಈಗ ಸದನದ ಒಳಗೂ ಬಂದಿದೆ ಎಂದು ನಗೆ ಚಟಾಕಿ ಹಾರಿಸಿದರು.







