ಬ್ರಿಟನ್: ಒಮೈಕ್ರಾನ್ ನಿಂದ ಪ್ರಥಮ ಸಾವಿನ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ:PTI
ಲಂಡನ್, ಡಿ.13: ಬ್ರಿಟನ್ನಲ್ಲಿ ಒಮೈಕ್ರಾನ್ ಕೊರೋನ ಸೋಂಕು ದೃಢಪಟ್ಟಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಹೊಸ ಸೋಂಕು ದೃಢಪಟ್ಟವರು ಆಸ್ಪತ್ರೆಗೆ ದಾಖಲಾಗುವ ಪ್ರಕರಣ ಹೆಚ್ಚುತ್ತಿದ್ದು ಜನತೆ ಬೂಸ್ಟರ್ ಲಸಿಕೆ ಪಡೆಯುವುದು ಉತ್ತಮ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಲಂಡನ್ನಲ್ಲಿನ ಲಸಿಕಾಕರಣ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಒಮೈಕ್ರಾನ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಿರುವುದು ಮತ್ತು ಸೋಂಕಿನಿಂದ ಒಬ್ಬ ವ್ಯಕ್ತಿ ಮೃತಪಟ್ಟಿರುವುದು ಅತ್ಯಂತ ದುಃಖದ ವಿಷಯವಾಗಿದೆ ಎಂದರು. ಒಮೈಕ್ರಾನ್ ಸೌಮ್ಯ ರೂಪಾಂತರ ಸೋಂಕು ಎಂಬ ಭಾವನೆಯನ್ನು ಜನತೆ ಬದಿಗಿರಿಸಬೇಕು ಮತ್ತು ಅದು ಹರಡುವ ವೇಗವನ್ನು ಗಮನಿಸಬೇಕು. ಈ ತಿಂಗಳಾಂತ್ಯದೊಳಗೆ ಇಂಗ್ಲೆಂಡ್ನ ಎಲ್ಲಾ ವಯಸ್ಕರೂ ಬೂಸ್ಟರ್ ಲಸಿಕೆ ಪಡೆಯುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ರವಿವಾರ ಜಾನ್ಸನ್ ಹೇಳಿದ್ದರು.
ಬ್ರಿಟನ್ನಲ್ಲಿ ಇದುವರೆಗೆ ಒಮೈಕ್ರಾನ್ ಸೋಂಕಿನಿಂದ 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸೋಮವಾರ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಹೇಳಿದ್ದಾರೆ.





