ನೆಲ್ಲಿಕಟ್ಟೆ: ಡಾ.ಕಾರಂತರದ ರಂಗಪ್ರಯೋಗ ಶಾಲೆ ನೆಲಸಮ

ಪುತ್ತೂರು, ಡಿ.13: 156 ವರ್ಷಗಳ ಇತಿಹಾಸವಿದ್ದ ಡಾ.ಶಿವರಾಮ ಕಾರಂತರ ರಂಗಪ್ರಯೋಗ ಶಾಲೆ ಎಂದೇ ಪರಿಚಿತವಾಗಿದ್ದ ಪುತ್ತೂರು ನಗರದ ನೆಲ್ಲಿಕಟ್ಟೆ ಎಂಬಲ್ಲಿನ ನೆಲ್ಲಿಕಟ್ಟೆ ಸರಕಾರಿ ಶಾಲೆಯ ಕಟ್ಟಡವನ್ನು ರವಿವಾರ ನೆಲಸಮಗೊಳಿಸಲಾಯಿತು.
ಈ ಶಾಲಾ ಕಟ್ಟಡ ಪುತ್ತೂರಿನ ಮೊದಲ ಶಾಲೆ ಎಂದು ಗುರುತಿಸಿಕೊಂಡಿತ್ತು. ಸಾವಿರಾರು ಮಂದಿಗೆ ಶಿಕ್ಷಣ ನೀಡಿದ ಈ ಕಟ್ಟಡವು ಡಾ.ಕೋಟ ಶಿವರಾಮ ಕಾರಂತರ ರಂಗಭೂಮಿ ಚಟುವಟಿಕೆಯ ಕೇಂದ್ರವಾಗಿತ್ತು. ಲಂಡನ್ ಥಿಯೆಟರ್ ಮಾದರಿಯ ಥಿಯೆಟರ್ ಒಂದನ್ನು ಅವರು ಈ ಶಾಲೆಯ ಒಳಗೆ ಕಟ್ಟಿಸಿದ್ದರು. ಅವರ ಅನೇಕ ನಾಟಕ, ಯಕ್ಷಗಾನಗಳ ಪ್ರಯೋಗ ಇಲ್ಲೇ ನಡೆದಿತ್ತು. ಅಲ್ಲದೆ ಪುತ್ತೂರು ದಸರಾ ನಾಡಹಬ್ಬವನ್ನು ಡಾ.ಕಾರಂತರು ಈ ಆವರಣದಲ್ಲಿಯೇ ಆರಂಭಿದ್ದರು.
ಹಲವು ವರ್ಷಗಳಿಂದ ನಾದುರಸ್ತಿಯಲ್ಲಿದ್ದು, ಕಲಿಕೆಗಾಗಿ ಕಟ್ಟಡದ ಸ್ಪಲ್ಪ ದೂರದಲ್ಲಿರುವ ಇನ್ನೊಂದು ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಾದುರಸ್ತಿಯಲ್ಲಿರುವ ಶಾಲಾ ಭಾಗದ ಪರಿಸರದಲ್ಲಿಯೇ ಮಕ್ಕಳ ಆಟದ ಮೈದಾನವಿದ್ದು, ಮಕ್ಕಳು ಆಟವಾಡುತ್ತಿದ್ದಾಗ ಕಟ್ಟಡದ ಭಾಗವೊಂದು ಕುಸಿದು ಬಿದ್ದ ಕಾರಣ ಉಂಟಾಗಬದುದಾದ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಇಡೀ ಕಟ್ಟಡವನ್ನು ಕೆಡವಿ ಹಾಕಲಾಗಿದೆ.
ಡಾ.ಕಾರಂತರ 2ನೇ ಕರ್ಮಭೂಮಿಯಾಗಿದ್ದ ಈ ಶಾಲೆಯ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲಿ ಉಳಿಸಿಕೊಳ್ಳುವ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಅಲ್ಲದೆ ಇದನ್ನು ಡಾ.ಶಿವರಾಮ ಕಾರಂತರ ಹೆಸರಿನ ಮ್ಯೂಸಿಯಂ ಮಾಡುವ ಬಗ್ಗೆಯೂ ಚಿಂತನೆ ನಡೆದಿತ್ತು. ಕೇವಲ 10 ಲಕ್ಷ ರೂ. ವೆಚ್ಚದಲ್ಲಿ ಬಾಲವನದಲ್ಲಿನ ಡಾ.ಶಿವರಾಮ ಕಾರಂತರ ಮನೆಯನ್ನು ಯಥಾಸ್ಥಿತಿಯಲ್ಲಿ ದುರಸ್ಥಿ ಪಡಿಸಿದಂತೆ ಈ ಶಾಲೆಯನ್ನೂ ದುರಸ್ಥಿ ಪಡಿಸಲು ಸಾಧ್ಯ ಎಂಬ ಮಾತು ಕೇಳಿ ಬಂದಿತ್ತು.
1865ರಲ್ಲಿ ನೆಲ್ಲಿಕಟ್ಟೆಯಲ್ಲಿ ಈ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ಬ್ರಿಟಿಷ್ ಸರಕಾರವಿದ್ದಾಗ ವಿಭಿನ್ನ ಶೈಲಿಯಲ್ಲಿ ಕೆಂಪು ಕಲ್ಲಿನಲ್ಲಿ ನಿರ್ಮಾಣಗೊಂಡಿರುವ ಈ ಶಾಲೆಯ ಕಟ್ಟಡದ ಸುತ್ತಲೂ ಉರುಟು ಉರುಟಾದ ಕೆಂಪು ಕಲ್ಲಿನ ಕಂಬಗಳು, ಮರದ ದೊಡ್ಡ ತೊಲೆಗಳಿಂದ ನಿರ್ಮಿತ ಗಟ್ಟಿ ಚಾವಣಿ, ಅಲ್ಲದೆ ಎತ್ತರದ ತರಗತಿ ಕೊಠಡಿ ಈ ಶಾಲೆಯ ವಿಶೇಷವಾಗಿತ್ತು. ಶಾಲೆಯ ಒಳಭಾಗದಲ್ಲಿ ವಿಶಿಷ್ಟ ರೀತಿಯ ತಳ ಮಟ್ಟದ (ಗುಂಡಿಯಲ್ಲಿ) ವೇದಿಕೆಯನ್ನು ನಿರ್ಮಿಸಲಾಗಿತ್ತು.
ಒಟ್ಟಿನಲ್ಲಿ ಶತಮಾನಗಳ ಇತಿಹಾಸವಿದ್ದ ಪುತ್ತೂರಿನ ಮೊದಲ ಶಾಲೆ ಎಂದೇ ಗುರುತಿಸಿಕೊಂಡಿದ್ದ, ಡಾ. ಕಾರಂತರ ರಂಗಪ್ರಯೋಗದ ಪರಂಪರೆಯ ಶಾಲೆಯ ಕಟ್ಟಡವು ಅಂತ್ಯಕಂಡಿದೆ.
'ಮಕ್ಕಳ ಸುರಕ್ಷೆಗಾಗಿ ಕಟ್ಟದ ತೆರವು'
ಶಾಲೆಯ ಕಟ್ಟಡವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಶಾಲಾ ಎಸ್‌ಡಿಎಂಸಿ ಮೂಲಕ ಅನೇಕ ಬಾರಿ ಶಾಸಕ, ಇಲಾಖೆಗೆ ಮನವಿ ಮಾಡಿದ್ದೆವು. ಆದರೆ ಅನುದಾನ ಇಲ್ಲದ ಕಾರಣ ದುರಸ್ಥಿ ಮಾಡಲಾಗಿಲ್ಲ. ಈ ನಡುವೆ ಮಕ್ಕಳು ಆಟವಾಡುತ್ತಿದ್ದ ವೇಳೆ ಕಟ್ಟಡದ ಅನೇಕ ಭಾಗ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಪೋಷಕರು ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಈ ನಿಟ್ಟಿನಲ್ಲಿ ರವಿವಾರ ಶಾಲಾ ಎಸ್‌ಡಿಎಂಸಿ ಮತ್ತು ಸ್ಥಳೀಯರು ಸೇರಿಕೊಂಡು ಈ ಕಟ್ಟಡದ ನಿರ್ವಹಣೆ ಮಾಡಲು ಶಾಸಕರ ಅನುಮತಿ ಪಡೆದುಕೊಂಡು ಹಂಚು ತೆಗೆಯುವ ಕಾರ್ಯ ನಡೆಸುತ್ತಿದ್ದೆವು. ಈ ಸಂದಭರ್ದಲ್ಲಿ ಕಟ್ಟಡ ಒಂದು ಭಾಗ ಸಂಪೂರ್ಣ ಕುಸಿದು ಬಿತ್ತು. ಮುಂದೆ ಉಳಿದ ಭಾಗವೂ ಬೀಳುವ ಅಪಾಯದಲ್ಲಿದ್ದ ಕಾರಣ ತುರ್ತಾಗಿ ಎಸ್‌ಡಿಎಂಸಿ ಮತ್ತು ಸ್ಥಳೀಯರ ಸಭೆ ನಡೆಸಿ ತೆರವು ಮಾಡುವ ನಿರ್ಣಯಕೈಗೊಂಡು ತೆರವುಗೊಳಿಸಲಾಗಿದೆ.
- ಪಂಚಾಕ್ಷರಿ, ಎಸ್‌ಡಿಎಂಸಿ ಅಧ್ಯಕ್ಷೆ







