ಉತ್ತರಪ್ರದೇಶದ ಗೋಶಾಲೆಗಳ ದುರವಸ್ಥೆ ಬಗ್ಗೆ ಆದಿತ್ಯನಾಥ್ ಗೆ ಪ್ರಿಯಾಂಕಾ ಗಾಂಧಿ ತರಾಟೆ

ಹೊಸದಿಲ್ಲಿ, ಡಿ. 13: ಉತ್ತರಪ್ರದೇಶದಲ್ಲಿರುವ ಗೋಶಾಲೆಗಳ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದ ಕುರಿತಂತೆ ಉತ್ತರಪ್ರದೇಶ ಸರಕಾರದ ಉತ್ತರದಾಯಿತ್ವದ ಬಗ್ಗೆ ಪ್ರಶ್ನೆ ಮಾಡುತ್ತಾರೆಯೇ ? ಎಂದು ಅವರು ಕೇಳಿದ್ದಾರೆ.
ಬಂಡಾದಲ್ಲಿ ಗೋಶಾಲೆಯ ಗೋವುಗಳನ್ನು ಜೀವಂತವಾಗಿ ದಫನ ಮಾಡಲಾಗಿದೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಅವರು ವಾಗ್ದಾಳಿ ನಡೆಸಿದರು. ನಿಮ್ಮ ಸರಕಾರ ಬಾಂಡಾದಲ್ಲಿ ನೂರಾರು ಗೋವುಗಳನ್ನು ಜೀವಂತ ದಫನ ಮಾಡಿದೆ. ಗೋಶಾಲೆಯಲ್ಲಿ ಗೋವುಗಳು ಕ್ರೂರತೆ ಹಾಗೂ ಅಮಾನವೀಯತೆಗೆ ಒಳಗಾಗುತ್ತಿವೆ ಎಂದು ಪ್ರಿಯಾಂಕಾ ಗಾಂಧಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘‘ನರೇಂದ್ರ ಮೋದಿ ಅವರೇ ನೀವು ಇಂದು ಉತ್ತರಪ್ರದೇಶದಲ್ಲಿದ್ದೀರಿ. ಗೋಶಾಲೆಗಳ ದುರವಸ್ಥೆ ಬಗ್ಗೆ ಉತ್ತರಪ್ರದೇಶ ಸರಕಾರದ ಉತ್ತದಾಯಿತ್ವದ ಬಗ್ಗೆ ನೀವು ಕೇಳುವಿರಾ?’’ ಎಂದು ಅವರು ಪ್ರಶ್ನಿಸಿದ್ದಾರೆ. ಬಂಡಾದ ಜಿಲ್ಲಾಧಿಕಾರಿ ಅನುರಾಗ್ ಪಟೇಲ್ ಅವರು 134 ಗೋವುಗಳು ಹಾಗೂ ಜಾನುವಾರುಗಳನ್ನು ನರೈನಿಯ ತಾತ್ಕಾಲಿಕ ಗೋಶಾಲೆಯಿಂದ ಇತರ ನಾಲ್ಕು ತಾತ್ಕಾಲಿಕ ಗೋಶಾಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಶನಿವಾರ ಹೇಳಿದ್ದರು. ಈ ಜಾನುವಾರುಗಳನ್ನು ಮಧ್ಯಪ್ರದೇಶದ ಅರಣ್ಯದಲ್ಲಿ ಜೀವಂತವಾಗಿ ದಫನ ಮಾಡಿರುವ ಕುರಿತ ಸೋಮವಾರ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಗೋವುಗಳು ಹಾಗೂ ಜಾನುವಾರುಗಳನ್ನು ಜೀವಂತವಾಗಿ ದಫನ ಮಾಡಿದ ಆರೋಪಕ್ಕೆ ಸಂಬಂಧಿಸಿ ಅಧಿಕಾರಿಗಳನ್ನು ಉತ್ತರಪ್ರದೇಶ ಸರಕಾರ ಅಮಾನತುಗೊಳಿಸಿತ್ತು.