ಟೀಕೆಗಳ ಬಳಿಕ ಸ್ತ್ರೀದ್ವೇಷಿ ಪ್ಯಾಸೇಜ್ ಕೈಬಿಟ್ಟ ಸಿಬಿಎಸ್ಇ: ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ನೀಡಲು ನಿರ್ಧಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಡಿ.13: ‘ಪತ್ನಿ ತನ್ನ ಪತಿಯ ಮಾರ್ಗದಲ್ಲಿ ನಡೆದರೆ ಮಾತ್ರ ಮಕ್ಕಳ ವಿಧೇಯತೆಗೆ ಪಾತ್ರಳಾಗುತ್ತಾಳೆ’. ‘ವ್ಯಕ್ತಿಯನ್ನು ಪೀಠದಿಂದ ಕೆಳಗಿಳಿಸುವಲ್ಲಿ ಪತ್ನಿ ಮತ್ತು ತಾಯಿ ತಮ್ಮನ್ನೇ ತಾವು ಶಿಸ್ತಿನ ವಿಧಾನಗಳಿಂದ ವಂಚಿತಗೊಳಿಸಿದ್ದರು’; ಇವು ಶನಿವಾರ ನಡೆದ ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಸಾರಾಂಶ ಬರೆಯುವಂತೆ ನೀಡಲಾಗಿದ್ದ ಪ್ಯಾಸೇಜ್ ಅಥವಾ ವಾಕ್ಯಗಳ ಗುಚ್ಛದಲ್ಲಿಯ ಕೆಲವು ಸಾಲುಗಳು. ಈ ಸಾಲುಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ಸೃಷ್ಟಿಸಿದ್ದು,ಇವು‘ಪ್ರತಿಗಾಮಿ ’ ಮತ್ತು ‘ಸ್ತ್ರೀದ್ವೇಷಿ ’ಯಾಗಿವೆ ಎಂದು ನೆಟ್ಟಿಗರು ಬಣ್ಣಿಸಿದ್ದರು. ಟೀಕೆಗಳಿಂದ ಎಚ್ಚೆತ್ತುಕೊಂಡಿರುವ ಸಿಬಿಎಸ್ಇ ಪ್ರಶ್ನೆಪತ್ರಿಕೆಯಿಂದ ಸದ್ರಿ ಪ್ಯಾಸೇಜನ್ನು ಕೈಬಿಡಲಾಗಿದೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನು ನೀಡಲಾಗುವುದು ಎಂದು ಸೋಮವಾರ ಪ್ರಕಟಿಸಿದೆ.
‘ಪತ್ನಿಯ ಸ್ವಾತಂತ್ರವು ಮಕ್ಕಳ ಮೇಲಿನ ಹೆತ್ತವರ ಅಧಿಕಾರವನ್ನು ನಾಶಗೊಳಿಸಿದೆ ಎನ್ನುವುದನ್ನು ಗಮನಿಸುವಲ್ಲಿ ಜನರು ನಿಧಾನರಾಗಿದ್ದರು. ಪತ್ನಿ ತನ್ನ ಪತಿಯ ಮಾರ್ಗದಲ್ಲಿ ನಡೆದರೆ ಮಾತ್ರ ಆಕೆ ಮಕ್ಕಳಿಂದ ವಿಧೇಯತೆಯನ್ನು ಪಡೆಯಬಲ್ಲಳು’ ಎಂದು ಪ್ರಶ್ನೆಪತ್ರಿಕೆಯಲ್ಲಿನ ಪ್ಯಾಸೇಜ್ ನಲ್ಲಿ ಹೇಳಲಾಗಿತ್ತು.
ಆಕ್ರೋಶಗಳ ಹಿನ್ನೆಲೆಯಲ್ಲಿ ಸಿಬಿಎಸ್ಇ,ತಾನು ಪೋಷಕರು ಮತ್ತು ವಿದ್ಯಾರ್ಥಿಗಳಿಂದ ‘ಮಿಶ್ರ ಪ್ರತಿಕ್ರಿಯೆಗಳನ್ನು ’ಸ್ವೀಕರಿಸಿದ್ದೇನೆ ಮತ್ತು ಇದು ಕುಟುಂಬದ ಮೇಲಿನ ಪ್ರತಿಗಾಮಿ ಕಲ್ಪನೆಗಳನ್ನು ಬೆಂಬಲಿಸುತ್ತಿರುವಂತಿದೆ ಮತ್ತು ಲಿಂಗ ಅಸಮಾನತೆಯನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ತಿಳಿಸಿದೆ.
ವಿವಾದಿತ ಪ್ಯಾಸೇಜ್ ಪ್ರಶ್ನೆಪತ್ರಿಕೆಗಳನ್ನು ಸಿದ್ಧಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಷಯವನ್ನು ಮರುಪರಿಶೀಲಿಸಲು ವಿಷಯ ತಜ್ಞರ ಸಮಿತಿಗೆ ಒಪ್ಪಿಸಲಾಗಿತ್ತು. ಅವರ ಶಿಫಾರಸಿನಂತೆ ಪ್ರಶ್ನೆಪತ್ರಿಕೆಯಿಂದ ಪ್ಯಾಸೇಜನ್ನು ಮತ್ತು ಸಂಬಂಧಿಸಿದ ಪ್ರಶ್ನೆಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಸಿಬಿಎಸ್ಇ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ ಬೆಳಿಗ್ಗೆ ಲೋಕಸಭೆಯಲ್ಲಿ ವಿವಾದಿತ ಪ್ಯಾಸೇಜನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಮಹಿಳೆಯರು ಸ್ವಾತಂತ್ರ ಗಳಿಸುವುದು ವಿವಿಧ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬಂತಹ ಕ್ರೂರಹೇಳಿಕೆಗಳನ್ನು ಅದು ಒಳಗೊಂಡಿದೆ. ಇಡೀ ಪ್ಯಾಸೇಜ್ ಇಂತಹ ಖಂಡನೀಯ ವಿಚಾರಗಳಿಂದ ತುಂಬಿದೆ ಮತ್ತು ಪ್ರಶ್ನೆಗಳೂ ಅಷ್ಟೇ ಅಸಂಬದ್ಧವಾಗಿವೆ. ಸಿಬಿಎಸ್ಇ ನಡೆಸುವ ಪ್ರಮುಖ ಪರೀಕ್ಷೆಯಲ್ಲಿ ಇಂತಹ ರಾಜಾರೋಷ ಸ್ತ್ರೀದ್ವೇಷಿ ವಿಷಯದ ಸೇರ್ಪಡೆಯನ್ನು ತಾನು ಬಲವಾಗಿ ಆಕ್ಷೇಪಿಸುತ್ತೇನೆ ಎಂದು ಹೇಳಿದರು.
ಇದು ಶಿಕ್ಷಣ ಮತ್ತು ಪರೀಕ್ಷೆಯ ಗುಣಮಟ್ಟವನ್ನು ಕಳಪೆಯಾಗಿ ಬಿಂಬಿಸುತ್ತದೆ ಹಾಗೂ ಪ್ರಗತಿಪರ ಮತ್ತು ಸಶಕ್ತ ಸಮಾಜದ ಎಲ್ಲ ನಿಯಮಗಳು ಮತ್ತು ತತ್ತ್ವಗಳಿಗೆ ವಿರುದ್ಧವಾಗಿದೆ ಎಂದ ಅವರು, ಪ್ರಶ್ನೆಯನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಮತ್ತು ಕ್ಷಮೆ ಯಾಚಿಸುವಂತೆ ಶಿಕ್ಷಣ ಸಚಿವಾಲಯವನ್ನು ಆಗ್ರಹಿಸಿದರು.