12 ಸಂಸದರ ಅಮಾನತು ವಿರುದ್ಧ ಬೀದಿಗಿಳಿದು ಹೋರಾಡಲು ನಿರ್ಧಾರ

ಹೊಸದಿಲ್ಲಿ: ರಾಜ್ಯಸಭೆಯ 12 ಮಂದಿ ಸದಸ್ಯರನ್ನು ಅಮಾನತುಗೊಳಿಸಿದ ನಿರ್ಧಾರದ ವಿರುದ್ಧ ಸಂಸತ್ ಭವನದಿಂದ ವಿಜಯಚೌಕದ ವರೆಗೆ ಪ್ರತಿಭಟನಾ ಜಾಥ ನಡೆಸಲು 18ಕ್ಕೂ ಹೆಚ್ಚು ವಿರೋಧ ಪಕ್ಷಗಳು ನಿರ್ಧರಿಸಿವೆ. ಈಗಾಗಲೇ ಕಳೆದ ಎರಡು ವಾರಗಳಿಂದ ಸಂಸತ್ತಿನ ಒಳಗೆ ಹಾಗೂ ಹೊರಗೆ ಸದಸ್ಯರ ಅಮಾನತು ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
ರಾಜ್ಯಸಭೆ ಹಾಗೂ ಲೋಕಸಭೆಯ ಮುಖಂಡರು ಮಂಗಳವಾರ ಮಧ್ಯಾಹ್ನ ನಡೆಯುವ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಬಗೆಯ ಸತ್ಯಾಗ್ರಹ ಮೂಲಕ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. "ಅಮಾನತಿನ ವಿರುದ್ಧ ನಾವು ಹೋರಾಡಲೇಬೇಕು. ನಮ್ಮ ಸದಸ್ಯರನ್ನು ಏಕೆ ಅಮಾನತು ಮಾಡಲಾಗಿದೆ ಮತ್ತು ಹೇಗೆ ಅವರನ್ನು ಸದನದಿಂದ ಹೊರಗಿಡಲಾಗಿದೆ ಎಂಬ ಬಗ್ಗೆ ಜನತೆಗೆ ತಿಳಿಸಬೇಕು. ಪಾದಯಾತ್ರೆ ಅಥವಾ ಎಲ್ಲ ರಾಜಕೀಯ ಪಕ್ಷಗಳು ಮಾಧ್ಯಮಗಳ ಜತೆ ಮಾತನಾಡುವ ಮೂಲಕ ಜನತೆಗೆ ಇದನ್ನು ತಿಳಿಸಲಿದ್ದೇವೆ. ವಿವಿಧ ರೂಪದ ಸತ್ಯಾಗ್ರಹ ಮೂಲಕ ಪ್ರತಿಭಟನೆ ಮುಂದುವರಿಯಲಿದೆ" ಎಂದು ಖರ್ಗೆ ಹೇಳಿದರು.
"ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಹೊರಟ ನಮ್ಮನ್ನು ಅಮಾನತು ಮಾಡಲಾಗಿದೆ. ಕಳೆದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಮೂರು ಬಾರಿ ಅಮಾನತುಗೊಳಿಸಲಾಗಿತ್ತು. ಆದಾಗ್ಯೂ ಸರ್ಕಾರ, ಸದನದಲ್ಲಿ ಮಾತನಾಡದಂತೆ ತಡೆಯಲು ಕಳೆದ ಅಧಿವೇಶನದ ಘಟನೆಗಳನ್ನು ಈ ಅಧಿವೇಶನಕ್ಕೂ ಎಳೆದಿದೆ" ಎಂದು ಅಮಾನತುಗೊಂಡ 12 ಸದಸ್ಯರ ಪೈಕಿ ಒಬ್ಬರಾದ ಟಿಎಂಸಿಯ ದೋಲಾ ಸೇನ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಲೋಕಸಭೆಯ ಕಲಾಪ ಸುಗಮವಾಗಿ ಸಾಗಿದರೆ, ಕಾಂಗ್ರೆಸ್ ಸಂಸದರು ರಾಜ್ಯಸಭೆಯಲ್ಲಿ ಸಭಾತ್ಯಾಗ ಮುಂದುವರಿಸಿದರು.