ವಿಧಾನ ಪರಿಷತ್ ಚುನಾವಣೆ: ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಗೆ ರೋಚಕ ಜಯ
6 ಮತಗಳಿಂದ ಸೋತ ಕಾಂಗ್ರೆಸ್ ಅಭ್ಯರ್ಥಿ ► ಮರು ಎಣಿಕೆಗೆ ಆಗ್ರಹಿಸಿ ಕಾರ್ಯಕರ್ತರಿಂದ ಮತಗಟ್ಟೆ ಎದುರು ಧರಣಿ

ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ ಬಿಜೆಪಿ ವಿಜೇತ ಅಭ್ಯರ್ಥಿ ಎಂ.ಕೆ.ಪ್ರಾಣೇಶ್
ಚಿಕ್ಕಮಗಳೂರು, ಡಿ.14: ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಆರು ಮತಗಳ ಅಂತರದ ರೋಚಕ ಗೆಲುವು ಸಾಧಿಸಿದ್ದಾರೆ. ಇಲ್ಲಿ 39 ಮತಗಳು ಅಸಿಂಧುಗೊಂಡಿರುವುದು ಗಮನಾರ್ಹ.
ಎಂ.ಕೆ.ಪ್ರಾಣೇಶ್ 1188 ಮತಗಳನ್ನು ಗಳಿಸಿದ್ದರೆ, ಅವರ ನಿಕಟ ಪ್ರತಿಸ್ಪರ್ಧಿ ಗಾಯತ್ರಿ ಶಾಂತೇಗೌಡ 1182 ಮತಗಳನ್ನು ಗಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಡಾ.ಕೆ.ಸುಂದರ ಗೌಡ 1 ಮತ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಮತ ಎಣಿಕೆಯ ಆರಂಭದಿಂದಲೇ ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ ಮತ್ತು ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಒಂದೊಮ್ಮೆ ಗಾಯತ್ರಿ ಶಾಂತೇಗೌಡ 15 ಮತಗಳ ಮುನ್ನಡೆ ಕೂಡಾ ಸಾಧಿಸಿದ್ದರು. ಆದರೆ ಅಂತಿಮವಾಗಿ ಎಂ.ಕೆ.ಪ್ರಾಣೇಶ್ ಆರು ಮತಗಳ ಗೆಲುವು ಸಾಧಿಸಿದರು.
ಒಟ್ಟು ಚಲಾವಣೆಯಾದ 2,410 ಮತಗಳಲ್ಲಿ 39 ಮತಗಳು ಅಸಿಂಧುಗೊಂಡಿವೆ. 2371 ಮತಗಳು ಎಣಿಕೆಗೆ ಅರ್ಹ ಎಂದು ಪರಿಗಣಿಸಲಾಗಿತ್ತು.
ಮತ ಎಣಿಕೆ ಕಾರ್ಯ ನಗರದ ಎಸ್.ಟಿ.ಜೆ. ಕಾಲೇಜು ಆವರಣದಲ್ಲಿ ನಡೆಯಿತು.
ಮರು ಎಣಿಕೆಗೆ ಆಗ್ರಹ: ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ
ಕಾಂಗ್ರೆಸ್ ಅಭ್ಯರ್ಥಿ 6 ಮತಗಳಿಂದ ಪರಾಭವಗೊಂಡಿದ್ದರಿಂದ ಗಾಯತ್ರಿ ಶಾಂತೇಗೌಡ ಚುನಾವಣಾ ಅಧಿಕಾರಿಗಳ ಬಳಿ ಮರು ಮತ ಎಣಿಕೆಗೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಚುನಾವಣಾಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ ಮತ ಎಣಿಕೆಯಲ್ಲಿ ಏನೋ ಮೋಸ ನಡೆದಿದೆ, ಮರು ಮತ ಎಣಿಕೆ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ಎದುರು ಧರಣಿ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.







