ಗುಜರಾತ್ :ಗುಡಿಸಲಿಗೆ ಬೆಂಕಿ, ಮಗು ಮೃತ್ಯು, ಐವರಿಗೆ ಗಾಯ

Photo: Indian express
ರಾಜ್ ಕೋಟ್: ಗುಜರಾತಿನ ರಾಜ್ಕೋಟ್ನ ನವಗಮ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಗುಡಿಸಲಿಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಹೆಣ್ಣು ಮಗು ಸಾವನ್ನಪ್ಪಿದೆ ಹಾಗೂ ಐವರು ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ 10:30 ರ ಸುಮಾರಿಗೆ ಕುವಡ್ವ ರಸ್ತೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿ 150 ಮೀಟರ್ ದೂರದಲ್ಲಿರುವ ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಗುಡಿಸಲು ಸೆಣಬಿನ ಬಟ್ಟೆಯಿಂದ ಮಾಡಲ್ಪಟ್ಟಿದೆ ಹಾಗೂ ಬೆಂಕಿಯು ಸ್ವಲ್ಪ ಸಮಯದೊಳಗೆ ಇಡೀ ಗುಡಿಸಲು ಆವರಿಸಿತು. ಗುಡಿಸಲಿನಲ್ಲಿದ್ದ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದಾಗ್ಯೂ, ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಪುರಿ ಎಂದು ಗುರುತಿಸಲಾದ ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ನಾರನ್ ಚುಡಾಸಮಾ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಇತರ ಗಾಯಾಳುಗಳನ್ನು ಪುರಿಯ ತಾಯಿ ಭಾವು (25), ತಂದೆ ಚಾಂಗಾ ಸೋಲಂಕಿ, ಸಹೋದರಿ ಪ್ರಿಯಾ (10), ಚಂಗಾ ಅವರ ಸೋದರಳಿಯ ಸುನೀಲ್ (24), ಮತ್ತು ಸುನೀಲ್ ಅವರ ಪತ್ನಿ ರೂಪಾ (26) ಎಂದು ಗುರುತಿಸಲಾಗಿದೆ.





