ಯುವತಿಯರನ್ನು ಕ್ರೈಸ್ತ ಧರ್ಮದತ್ತ ಸೆಳೆಯಲು ಯತ್ನ ಆರೋಪ: ಮಿಷನರೀಸ್ ಆಫ್ ಚ್ಯಾರಿಟಿ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಯುವತಿಯರನ್ನು ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿಸಲು ಯತ್ನಿಸುತ್ತಿದ್ದಾರೆ ಮತ್ತು ಹಿಂದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆಂಬ ಆರೋಪದಡಿಯಲ್ಲಿ ಮದರ್ ಥೆರೆಸಾ ಅವರು ಸ್ಥಾಪಿಸಿರುವ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಡಿಸೆಂಬರ್ 9ರಂದು ವಡೋದರಾದ ಮಕರಪುರ ಪ್ರದೇಶದಲ್ಲಿರುವ ಬಾಲಕಿಯರ ಆಶ್ರಯತಾಣಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಾಯಾಂಕ್ ತ್ರಿವೇದಿ ಭೇಟಿ ನೀಡಿದ ನಂತರ ದಾಖಲಿಸಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. ದೂರು ದಾಖಲಿಸಿದ ಸಂದರ್ಭ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರೂ ಉಪಸ್ಥಿತರಿದ್ದರು.
ಆಶ್ರಯತಾಣದಲ್ಲಿ ಬಾಲಕಿಯರಿಗೆ ಕ್ರೈಸ್ತ ಧಾರ್ಮಿಕ ಪಠ್ಯಗಳನ್ನು ಓದಲು ಬಲವಂತಪಡಿಸಲಾಗುತ್ತಿತ್ತು ಹಾಗೂ ಈ ಮೂಲಕ ಅವರನ್ನು ಕ್ರೈಸ್ತ ಧರ್ಮದತ್ತ ಸೆಳೆಯುವ ಉದ್ದೇಶವಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂಸ್ಥೆಯ ವಿರುದ್ಧ ಐಪಿಸಿ ಸೆಕ್ಷನ್ 295ಎ ಹಾಗೂ 298 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2003 ಅನ್ವಯವೂ ಪ್ರಕರಣ ದಾಖಲಿಸಲಾಗಿದ್ದು ಈ ಕಾಯಿದೆಯನ್ವಯ ಬಲವಂತದ ಮತಾಂತರಕ್ಕೆ ನಿಷೇಧವಿದ್ದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬಹುದಾಗಿದೆ.
"ಫೆಬ್ರವರಿ 10, 2021 ಹಾಗೂ ಡಿಸೆಂಬರ್ 9, 2021ರ ನಡುವೆ ಈ ಸಂಶ್ಥೆಯು ಹಿಂದುಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಚಟುವಟಿಕೆಗಳಲ್ಲಿ ತೊಡಗಿದೆ. ಅಲ್ಲಿನ ಬಾಲಕಿಯರಿಗೆ ಕುತ್ತಿಗೆಯಲ್ಲಿ ಶಿಲುಬೆ ಧರಿಸುವಂತೆ ಅವರು ಬಳಸುವ ಸ್ಟೋರ್ ರೂಂನಲ್ಲಿ ಬೈಬಲ್ ಇರಿಸುವಂತೆ ಹಾಗೂ ಅದನ್ನು ಓದುವಂತೆ ಮಾಡಲಾಗುತ್ತಿದೆ ಹಾಗೂ ಇದು ಬಾಲಕಿಯರನ್ನು ಬಲವಂತವಾಗಿ ಮತಾಂತರಿಸಲು ನಡೆಸುವ ಯತ್ನ" ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಹಿಂದು ಯುವತಿಯೊಬ್ಬಳನ್ನು ಕ್ರೈಸ್ತ ಧರ್ಮದವರನ್ನು ಮದುವೆಯಾಗಲು ಸಂಸ್ಥೆ ಬಲವಂತಪಡಿಸಿದೆ ಹಾಗೂ ಪಂಜಾಬಿ ಯುವತಿಯೊಬ್ಬಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದೆ ಹಾಗೂ ಹಿಂದುಗಳಿಗೆ ಮಾಂಸಾಹಾರ ನೀಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದರೆ ಸಂಸ್ಥೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆ. ಆಶ್ರಯತಾಣದಲ್ಲಿರುವ 24 ಬಾಲಕಿಯರು ಅಲ್ಲಿನ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.







