ಉಡುಪಿ: ರಾ.ಹೆದ್ದಾರಿಯಲ್ಲಿನ ಸೂಚನಾ ಫಲಕಕ್ಕೆ ಲಾರಿ ಢಿಕ್ಕಿ: ಚಾಲಕ ಮೃತ್ಯು

ಉಡುಪಿ, ಡಿ.14: ಇನ್ಸಲೇಟರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಸಂತೆಕಟ್ಟೆ ಬಳಿಯ ಶಮಾ ಹೋಂಡಾ ಶೋ ರೂಮ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.14ರಂದು ನಸುಕಿನ ವೇಳೆ ನಡೆದಿದೆ.
ಭಟ್ಕಳ ಹೆಬ್ಳೆ ಮದೀನಾ ಕಾಲನಿ ನಿವಾಸಿ ಮುಹಮ್ಮದ್ ಸಾದಿಕ್ ಎಂಬವರ ಪುತ್ರ ಮುಹಮ್ಮದ್ ತೌಫೀಕ್(29) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಲಾರಿಯಲ್ಲಿದ್ದ ಇನೋರ್ವ ಚಾಲಕ ಭಟ್ಕಳ ಹೆಬ್ಬಾಳ ಗ್ರಾಮದ ಮೆಕ್ಕಾ ಕಾಲನಿಯ ನಝ್ರುಲ್ಲಾ(32) ಎಂಬವರು ಗಾಯಗೊಂಡಿದ್ದಾರೆ.
ಕೇರಳದ ಚಾವಕಾಡದಿಂದ ಭಟ್ಕಳಕ್ಕೆ ಬರುತ್ತಿದ್ದ ಲಾರಿಯು ತಡರಾತ್ರಿ ಒಂದು ಗಂಟೆ ಸುಮಾರಿಗೆ ಸಂತೆಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಮೇಲೆ ಹತ್ತಿ, ಕುಂದಾಪುರ- ಕಾರವಾರ_ ಪಣಜಿ ಸೂಚನಾ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿತು. ಗಂಭೀರವಾಗಿ ಗಾಯಗೊಂಡಿದ್ದ ಅದರ ಚಾಲಕ ಮುಹಮ್ಮದ್ ತೌಫೀಕ್ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಸೂಚನಾ ಫಲಕದ ಕಂಬವೂ ಜಖಂಗೊಂಡಿದೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








