ಅಮಿತ್ ಶಾ ಕಚೇರಿ ಸಂಖ್ಯೆಯನ್ನು ನಕಲಿಸಿ ನಟಿ ಜಾಕ್ವೆಲಿನ್ ಗೆ ಕರೆ ಮಾಡಿದ್ದ ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್

ಹೊಸದಿಲ್ಲಿ: ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಸ್ನೇಹ ಸಂಪಾದಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನು ನಕಲಿಸಿ ಕರೆ ಮಾಡಿದ್ದ ಹಾಗೂ ತಾನು ತಮಿಳುನಾಡಿನ ಮಾಜಿ ಸೀಎಂ ಜಯಲಲಿತಾ ಅವರ ರಾಜಕೀಯ ಕುಟುಂಬಕ್ಕೆ ಸೇರಿದವನು ಎಂದು ಹೇಳಿಕೊಂಡಿದ್ದ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆತನ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್ ಶೀಟ್‍ನಲ್ಲಿ ಜಾರಿ ನಿರ್ದೇಶನಾಲಯ ಹೇಳಿದೆ.
ಚಂದ್ರಶೇಖರ್ ತನ್ನನ್ನು ಶೇಖರ್ ರತ್ನವೇಲ್ ಎಂದು ಪರಿಚಯಿಸಿದ್ದ ಎಂದು ನಟಿ ಜಾಕ್ವೆಲಿನ್ ನೀಡಿದ ಹೇಳಿಕೆಯನ್ನು ನಿರ್ದೇಶನಾಲಯ ಈಗಾಗಲೇ ದಾಖಲಿಸಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ಸಲ್ಲಿಸಲಾಗಿದ್ದು ಚಂದ್ರಶೇಖರ್, ಆತನ ಪತ್ನಿ ಲೀನಾ ಮರಿಯಾ ಪೌಲ್ ಮತ್ತು ಆರು ಮಂದಿ ಇತರರನ್ನು ಅದರಲ್ಲಿ ಹೆಸರಿಸಲಾಗಿದೆ.
"ಡಿಸೆಂಬರ್(2020) ಮತ್ತು ಜನವರಿ 2021 ನಡುವೆ ಆತ ಜಾಕ್ವೆಲಿನ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದ್ದ ಹಾಗೂ ಆಕೆಗೆ ಹಲವು ಕರೆಗಳು ಬರುತ್ತಿದ್ದುದರಿಂದ ಈತ ಯಾರೆಂದು ಖಚಿತವಿರಲಿಲ್ಲ. ನಂತರ ಜಾಕ್ವೆಲಿನ್ ಅವರ ಮೇಕಪ್ ಕಲಾವಿದ ಶಾನ್ ಮುತ್ತತ್ತಿಲ್ ಅವರನ್ನು ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಸಂಪರ್ಕಿಸಿ ಶೇಖರ್ ಒಬ್ಬ ಪ್ರಮುಖ ವ್ಯಕ್ತಿ ಮತ್ತು ಆತ ಜಾಕ್ವೆಲಿನ್ ಜತೆ ಮಾತನಾಡಲು ಇಚ್ಛಿಸುತ್ತಾರೆ ಎಂದು ತಿಳಿಸಲಾಗಿತ್ತು ಆದರೆ ತನಿಖೆಯಿಂದ ಇದೊಂದು ಸ್ಪೂಫ್ ಕಾಲ್ ಎಂದು ತಿಳಿದು ಬಂದಿತ್ತು" ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ನಂತರ ಜಾಕ್ವೆಲಿನ್ ಆತನನ್ನು ಸಂಪರ್ಕಿಸಿದಾಗ ಆತ ಸನ್ ಟಿವಿ ಮಾಲೀಕ ಎಂದು ತನ್ನ ಕುಟುಂಬದೊಂದಿಗೆ ಪರಿಚಯಿಸಿದ್ದ ಹಾಗೂ ತಾನು ಜಯಲಲಿತಾ ಕುಟುಂಬಕ್ಕೆ ಸೇರಿದವನು ಹಾಗೂ ಚೆನ್ನೈನವನು, ಜಾಕ್ವೆಲಿನ್ ದಕ್ಷಿಣದ ಚಿತ್ರಗಳಲ್ಲಿ ನಟಿಸಬೇಕು ಎಂದು ಹೇಳಿದ್ದನೆಂದು ಇಡಿ ಹೇಳಿದೆ.
ನಟಿ ತನಗೆ ಆತನಿಂದ ಮೂರು ಡಿಸೈನರ್ ಬ್ಯಾಗ್, ಎರಡು ಡಿಸೈನರ್ ಜಿಮ್ ಉಡುಗೆ, ಒಂದು ಜತೆ ಲೂಯಿ ವಿಟೋನ್ ಶೂ, ಎರಡು ಜತೆ ವಜ್ರದ ಕಿವಿಯೋಲೆ ಹಾಗೂ ಮೂರು ಬ್ರೇಸ್‍ಲೆಟ್‍ಗಳು ಉಡುಗೊರೆಯಾಗಿ ದೊರಕಿತ್ತು ಎಂದು ತನ್ನ ಎರಡು ಹೇಳಿಕೆಗಳಲ್ಲಿ ನಟಿ ತಿಳಿಸಿದ್ದಾರೆ.
ಆತ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ದಿಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗುವ ತನಕ ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದೂ ಜಾರಿ ನಿರ್ದೇಶನಾಲಯ ಕಂಡುಕೊಂಡಿದೆ.