ಟ್ವೆಂಟಿ-20 ಕ್ರಿಕೆಟ್:ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಗೆಲುವು ದಾಖಲಿಸಿ ತನ್ನದೇ ದಾಖಲೆ ಮುರಿದ ಪಾಕ್

ಹೊಸದಿಲ್ಲಿ: ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ವೆಸ್ಟ್ ಇಂಡೀಸ್ ಅನ್ನು 63 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಪಾಕಿಸ್ತಾನವು ಚುಟುಕುಮಾದರಿ ಕ್ರಿಕೆಟ್ ನಲ್ಲಿ ಬೃಹತ್ ಮೈಲಿಗಲ್ಲನ್ನು ತಲುಪಿತು.
ಬಾಬರ್ ಆಝಮ್ ನೇತೃತ್ವದ ತಂಡವು 2021 ರಲ್ಲಿ 18 ನೇ ಟಿ-20 ಗೆಲುವನ್ನು ದಾಖಲಿಸಿದೆ. ಇದು ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ತಂಡದಿಂದ ಅತಿ ಹೆಚ್ಚು ಗೆಲುವಾಗಿದೆ. 2018 ರಲ್ಲಿ ದಾಖಲಿಸಿದ್ದ 17 ಗೆಲುವುಗಳ ತನ್ನದೇ ದಾಖಲೆಯನ್ನು ಮೀರಿಸಿದೆ. ಪಾಕ್ ತಂಡ ಮಾಜಿ ನಾಯಕ ಸರ್ಫರಾಝ್ ಅಹ್ಮದ್ ನಾಯಕತ್ವದಲ್ಲಿ 2018ರಲ್ಲಿ ಈ ಸಾಧನೆ ಮಾಡಿತ್ತು.
201 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 137 ರನ್‌ಗಳಿಗೆ ಆಲೌಟ್ ಆಯಿತು. 26 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಶಾಯ್ ಹೋಪ್ ಗರಿಷ್ಠ ಸ್ಕೋರರ್ ಆಗಿದ್ದಾರೆ.
ಪಾಕಿಸ್ತಾನದ ಪರ ಮುಹಮ್ಮದ್ ವಾಸಿಂ ಜೂನಿಯರ್ ನಾಲ್ಕು ವಿಕೆಟ್ಗಳನ್ನು ಪಡೆದರೆ, ಶಾದಾಬ್ ಖಾನ್ ಮೂರು ವಿಕೆಟ್ಗಳನ್ನು ಪಡೆದರು.
ಇದಕ್ಕೂ ಮೊದಲು ನಾಯಕ ಬಾಬರ್ (0) ಮತ್ತು ಫಖರ್ ಝಮಾನ್ (10) ಬೇಗನೆ ಔಟಾದ ನಂತರ ಚೇತರಿಸಿಕೊಂಡ ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 200 ರನ್ ಗಳಿಸಿತು.
ಮುಹಮ್ಮದ್ ರಿಝ್ವಾನ್ (52 ಎಸೆತಗಳಲ್ಲಿ 78 ರನ್) 2021 ರಲ್ಲಿ 11 ನೇ ಟಿ-20 ಅರ್ಧಶತಕವನ್ನು ಗಳಿಸಿದರು. ಹೈದರ್ ಅಲಿ (39 ಎಸೆತಗಳಲ್ಲಿ 68) ಕೂಡ ಅರ್ಧಶತಕ ಗಳಿಸಿದರು.
ಕ್ಯಾಲೆಂಡರ್ ವರ್ಷದಲ್ಲಿ ತಂಡದಿಂದ ಅತ್ಯಂತ ಹೆಚ್ಚು ಗೆಲುವುಗಳು (ಟಿ20)
18* ಪಾಕಿಸ್ತಾನ (2021)
17 ಪಾಕಿಸ್ತಾನ (2018)
15 ಭಾರತ (2016)
14 ಪಪುವಾ ನ್ಯೂಗಿನಿಯಾ (2019)