ದಿಲ್ಲಿ ದಂಗೆಗಳು:10 ತಿಂಗಳುಗಳಿಂದ ವಿಚಾರಣೆಗೆ ಗೈರಾಗಿರುವ ಪ್ರಾಸಿಕ್ಯೂಟರ್ ಗೆ 3,000 ರೂ.ದಂಡ

ದಿಲಿ ಗಲಭೆಯ ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.14: ದಿಲ್ಲಿ ದಂಗೆಗಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ 10 ತಿಂಗಳುಗಳಿಂದಲೂ ತನ್ನೆದುರು ಹಾಜರಾಗುವಲ್ಲಿ ವಿಫಲಗೊಂಡಿರುವ ವಿಶೇಷ ಸರಕಾರಿ ಅಭಿಯೋಜಕರಿಗೆ 3,000 ರೂ.ಗಳ ದಂಡವನ್ನು ವಿಧಿಸಿರುವ ಇಲ್ಲಿಯ ಮುಖ್ಯ ಮಹಾನಗರ ನ್ಯಾಯಾಲಯವು,ಅದನ್ನು ಅವರ ವೇತನದಿಂದ ಕಡಿತಗೊಳಿಸುವಂತೆ ಆದೇಶಿಸಿದೆ.
ನ್ಯಾ.ಎ.ಕೆ.ಗರ್ಗ್ ಅವರು ಶುಕ್ರವಾರ ಪ್ರಕರಣವನ್ನು ಕೈಗೆತ್ತಿಕೊಂಡಾಗ ವಿಶೇಷ ಸರಕಾರಿ ಅಭಿಯೋಜಕರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಪೊಲೀಸರು ಕೋರಿಕೊಂಡಿದ್ದರು.
ಜ.30ರಂದು ದೋಷಾರೋಪಣ ಪಟ್ಟಿ ಸಲ್ಲಿಕೆಯಾದ ಬಳಿಕ ಸರಕಾರಿ ವಕೀಲರು ಒಮ್ಮೆಯೂ ನ್ಯಾಯಾಲಯದಲ್ಲಿ ಹಾಜರಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದರಾದರೂ, ಸರಕಾರವು 3,000 ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು ಎಂಬ ಷರತ್ತಿನೊಂದಿಗೆ ವಿಚಾರಣೆಯನ್ನು ಮುಂದೂಡಲು ಸಮ್ಮತಿಸಿದರು.
ಕಳೆದ ವಾರ ದಿಲ್ಲಿಯ ಇನ್ನೊಂದು ನ್ಯಾಯಾಲಯವೂ ದಂಗೆಗಳಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯಲ್ಲಿ ವಿಶೇಷ ಸರಕಾರಿ ಅಭಿಯೋಜಕರ ಗೈರುಹಾಜರಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.