ಡಿ.21ರಂದು ವೀರ ರಾಣಿ ಅಬ್ಬಕ್ಕ ಉತ್ಸವ-2021 ರಜತ ಸಂಭ್ರಮ
ಚಂದ್ರಕಲಾ ನಂದಾವರರಿಗೆ 'ವೀರ ರಾಣಿ ಅಬ್ಬಕ್ಕ ಪ್ರಶಸ್ತಿ', ರೋಹಿಣಿಯವರಿಗೆ 'ವೀರ ರಾಣಿ ಅಬ್ಬಕ್ಕ ಪುರಸ್ಕಾರ'

ಚಂದ್ರಕಲಾ ನಂದಾವರ, ಕೆ.ರೋಹಿಣಿ
ಉಳ್ಳಾಲ, ಡಿ.14: ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಉಳ್ಳಾಲ ನಗರಸಭೆಯ ಸಹಯೋಗದಲ್ಲಿ 'ವೀರ ರಾಣಿ ಅಬ್ಬಕ್ಕ ಉತ್ಸವ-2021 ರಜತ ಸಂಭ್ರಮ' ಕಾರ್ಯಕ್ರಮವು ಡಿ.21ರಂದು ಉಳ್ಳಾಲ ನಗರ ಸಭೆ ಆವರಣದಲ್ಲಿರುವ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ಜರುಗಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ನೀಡುವ 'ವೀರ ರಾಣಿ ಅಬ್ಬಕ್ಕ ಪ್ರಶಸ್ತಿ'ಗೆ ಗಣಪತಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಚಂದ್ರಕಲಾ ನಂದಾವರ ಅವರನ್ನು ಹಾಗೂ 'ವೀರ ರಾಣಿ ಅಬ್ಬಕ್ಕ ಪುರಸ್ಕಾರ'ಕ್ಕೆ ದ.ಕ. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕಿ ಕೆ.ರೋಹಿಣಿಯವರನ್ನು ಆಯ್ಕೆ ಮಾಡಲಾಗಿದೆ. ಉತ್ಸವ ಸಮಾರಂಭದಲ್ಲಿ ಅವರಿಬ್ಬರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಕಾರ್ಯಕ್ರಮದ ಪ್ರಯುಕ್ತ ತೊಕ್ಕೊಟ್ಟು ಪೇಟೆಯಿಂದ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷ ದೇವಕಿ ಉಳ್ಳಾಲ, ಆಲಿಯಬ್ಬ, ಕಾರ್ಯದರ್ಶಿಗಳಾದ ಶಶಿಕಾಂತಿ ಉಳ್ಳಾಲ, ಸುಷ್ಮಾ ಜನಾರ್ದನ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ, ತುಳು ಸಾಹಿತ್ಯ ಅಕಾಡಮಿ ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು.





