ಸಂಘಪರಿವಾರದವರಿಗೆ ಬಲವಂತದ ಮತಾಂತರ ನೆಪ: ವಕೀಲೆ ಮಾನವಿ ಅತ್ರಿ

ಬೆಂಗಳೂರು, ಡಿ.14: ದೇಶದಲ್ಲಿ ಇದುವರೆಗೆ ಬಲವಂತದ ಮತಾಂತರ ನಡೆದಿಲ್ಲ. ಆದರೆ ಬಲವಂತದ ಮತಾಂತರ ಎಂಬ ಹೆಸರಿನಲ್ಲಿ ಸಂಘಪರಿವಾರದವರು ಕ್ರೈಸ್ತರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ವಕೀಲೆ ಮಾನವಿ ಅತ್ರಿ ಆರೋಪಿಸಿದ್ದಾರೆ.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಬಲವಂತದಿಂದ ಮತಾಂತರವಾಗಿರುವ ಒಂದೇ ಒಂದು ಪ್ರಕರಣ ದೇಶದಲ್ಲಿ ಇದುವರೆಗೂ ನಡೆದಿಲ್ಲ. ಬಲವಂತದ ಮತಾಂತರವನ್ನು ಕೇವಲ ನೆಪವನ್ನಾಗಿಸಿಕೊಂಡ ಸಂಘಪರಿವಾರದ ಕಾರ್ಯಕರ್ತರು ಕ್ರೈಸ್ತರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದಾರೆ. ಈ ವರ್ಷ ನವೆಂಬರ್ ಅಂತ್ಯದ ವೇಳಗೆ ಹಿಂದುತ್ವ ಸಂಘಟನೆಗಳು 39 ಪಾದ್ರಿಗಳ ಮೇಲೆ ಹಲ್ಲೆ ಮಾಡಿವೆ. ಈ ಸರಣಿ ಘಟನೆಗಳಲ್ಲಿ ಪೊಲೀಸರು ಹಿಂದುತ್ವ ಗುಂಪುಗಳೊಂದಿಗೆ ಶಾಮೀಲಾಗಿದ್ದಾರೆ. ಪೊಲೀಸ್ ಇಲಾಖೆಯು ಹಿಂದುತ್ವ ಶಕ್ತಿಗಳನ್ನು ಬಲಪಡಿಸುವ ಅಂಗವಾಗಿ ಮಾರ್ಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದರು.
ಗೂಳಿಹಟ್ಟಿ ಶೇಖರ್ ತನ್ನ ತಾಯಿಯನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆಯೇ ಹೊರತು ಅವರ ತಾಯಿ ತನ್ನನ್ನು ಬಲವಂತದಿಂದ ಮತಾಂತರ ಮಾಡಿದ್ದಾರೆ ಎಂದು ಇದುವರೆಗೂ ಹೇಳಿಲ್ಲ. ಅಂತಹದ್ದರಲ್ಲಿ ಬಲವಂತದ ಮತಾಂತರ ಎಂಬುದು ಕೇವಲ ಕ್ರೈಸ್ತರನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದ ಅವರು, ಕ್ರೈಸ್ತರ ಮೇಲೆ ಹಲ್ಲೆ ನಡೆದರೂ, ಕೈಸ್ತರ ಮೇಲೆಯೇ ಕೌಂಟರ್ ದೂರುಗಳು ದಾಖಲಾಗುತ್ತಿವೆ. ಕ್ರೈಸ್ತ ಯುವಕರು ಸಂಘಪರಿವಾರದವರಂತೆ ತಲ್ವಾರ್‍ಗಳ ಪ್ರದರ್ಶನ ಮಾಡಿಲ್ಲ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‍ನ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯು ಜಾರಿಯಾದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯುಂಟಾಗುತ್ತದೆ. ರಾಜ್ಯ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಉತ್ಸುಕತೆಯನ್ನು ವ್ಯಕ್ತಪಡಿಸುತ್ತಿದೆ. ಕಾಯ್ದೆ ಜಾರಿಯಾದರೆ, ಸಂವಿಧಾನದ 25ನೇ ವಿಧಿಯ ಉಲ್ಲಂಘನೆ ಆಗುವುದರಿಂದ ಮೂಲಭೂತ ಹಕ್ಕನ್ನು ಕಸಿದುಕೊಂಡಿರುವ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಹಿರಿಯ ಪತ್ರಕರ್ತ ಆಕರ್ ಪಟೇಲ್ ಮಾತನಾಡಿ, ಕ್ರಿಶ್ಚಿಯನ್ನರ ವಿರುದ್ಧ ನಡೆದ ದಾಳಿಗಳನ್ನು ಕುರಿತು ಪ್ರಸಾರ ಮಾಡಲು ಮಾಧ್ಯಮಗಳು ಸಂಪೂರ್ಣವಾಗಿ ವಿಫಲವಾಗಿವೆ. ಪಕ್ಷಪಾತ ಧೋರಣೆಯನ್ನು ಒಳಗೊಂಡ ಮಾಧ್ಯಮಗಳು ಕ್ರೈಸ್ತರನ್ನು ಅಫರಾಧಿಗಳು ಎಂಬಂತೆ ಬಿಂಬಿಸುತ್ತಿವೆ ಎಂದರು.
ಗೋಷ್ಠಿಯಲ್ಲಿ ಪಿಯುಸಿಎಲ್‍ನ ಶುಜಾಯತುಲ್ಲಾ, ಮೈತ್ರೀಯಿ ಕೃಷ್ಣನ್, ಐಶ್ವರ್ಯ, ರಾಮು ಮತ್ತಿತ್ತರು ಉಪಸ್ಥಿತರಿದ್ದರು.
ಸರಕಾರ ಹಲ್ಲೆಕೋರರ ಪರವಾಗಿದೆ
ಪ್ರತಿ ರವಿವಾರ ಚರ್ಚ್‍ಗಳಲ್ಲಿ ಪ್ರಾರ್ಥನೆ ಮಾಡುತ್ತಿರುವಾಗ, ಸಂಘಪರಿವಾರದವರು ಚರ್ಚ್‍ಗೆ ನುಗ್ಗಿ ಕ್ರೈಸ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಚರ್ಚ್‍ನ ಪೀಠೋಪಕರಣಗಳನ್ನು ದ್ವಂಸ ಮಾಡುತ್ತಿದ್ದಾರೆ. ಚರ್ಚ್‍ಗಳಿಗೆ ನುಗ್ಗಿ ಭಜನೆ ಮಾಡುತ್ತಿದ್ದಾರೆ. ಬೈಬಲ್ ಗ್ರಂಥಗಳಿಗೆ ಬೆಂಕಿ ಇಡುತ್ತಿದ್ದಾರೆ. ರಾಮನಗರದಲ್ಲಿ 13ವರ್ಷದ ಹೆಣ್ಣು ಮಗುವಿಗೆ ಬೂಟುಕಾಲಿನಿಂದ ಒದ್ದಿದ್ದಾರೆ. ಇದನ್ನು ಪ್ರಶ್ನಿಸಬೇಕಾದ ಸರಕಾರವು ಸಂಘಪರಿವಾರದ ಕಾರ್ಯಕರ್ತರನ್ನು ಸಮರ್ಥಿಸಿಕೊಂಡು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
-ಪಾದರ್ ಲೂಕರ್, ಸದಸ್ಯ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್
ಸರಕಾರದಿಂದ ಹಕ್ಕು ಕಸಿಯುವ ಯತ್ನ
ರಾಜ್ಯದಲ್ಲಿ 2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರವು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು, ಹಲ್ಲೆ ನಡೆಸುತ್ತಿದ್ದರು. ಈಗಲೂ ಅದೇ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಿರುವುದರಿಂದ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ಉಂಟಾಗುವ ಕೆಲಸಗಳನ್ನು ಮಾಡುತ್ತಿದೆ. ಬಿಜೆಪಿ ಸರಕಾರವು ಜನರು ಏನನ್ನು ತಿನ್ನಬೇಕು, ಯಾರನ್ನು ಮದುವೆಯಾಗಬೇಕು, ಯಾರನ್ನು ಆರಾಧಿಸಬೇಕು ಎಂಬ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನ ಮಾಡುತ್ತಿದೆ. ಅಲ್ಪಸಂಖ್ಯಾತರ ಹತ್ತಿಕ್ಕುವ ಕಾಯ್ದೆಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಲು ಸಾಧ್ಯವೇ ಇಲ್ಲ.
-ಸಿಂಥಿಯಾ ಸ್ಟೀಫನ್, ಸದಸ್ಯೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್








