ಪರೀಕ್ಷೆ ಇಲ್ಲದೆ ಉತ್ತೀರ್ಣ ಮಾಡಬೇಕೆಂಬ ಬೇಡಿಕೆ ಒಪ್ಪಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ
ಕಾನೂನು ವಿವಿ ಪರೀಕ್ಷೆ ಗೊಂದಲ

ಬೆಳಗಾವಿ, ಡಿ. 14: ಹುಬ್ಬಳ್ಳಿಯ ಕಾನೂನು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಡಿ.15ಕ್ಕೆ ಪರೀಕ್ಷೆ ನಡೆಸುವ ಸಂಬಂಧದ ಉಪಕುಲಪತಿಗಳ ತೀರ್ಮಾನವನ್ನು ರಾಜ್ಯ ಸರಕಾರ ಬಲವಾಗಿ ಸಮರ್ಥಿಸಿದ್ದು, ‘ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕೆಂಬ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷಣೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಸಾದ್ ಅಬ್ಬಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಬೇಕೆಂಬ ಕೆಲವರ ಬೇಡಿಕೆ ಸರಿಯಲ್ಲ. ಭವಿಷ್ಯದ ನ್ಯಾಯವಾದಿಗಳು, ನ್ಯಾಯಮೂರ್ತಿಗಳು ಹೀಗೆ ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸುವುದು ವಿವಿ ಘನತೆಗೆ ಧಕ್ಕೆಯಾಗಲಿದೆ ಎಂದು ವಿವರಿಸಿದರು.
ಈಗಾಗಲೇ 17 ಸಾವಿರ ವಿದ್ಯಾರ್ಥಿಗಳು ಆಫ್‍ಲೈನ್ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಉಪಕುಲಪತಿಗಳ ಕುರಿತು ಯಾವುದೇ ರೀತಿಯ ವೈಯಕ್ತಿಕ ವಿಚಾರಗಳಿದ್ದರೆ ಸದಸ್ಯರು ಸರಕಾರದ ಗಮನಕ್ಕೆ ತರಬಹುದು. ಆದರೆ, ಓದದೆ, ಪರೀಕ್ಷೆ ಇಲ್ಲದೆ ಪಾಸ್ ಮಾಡುವ ಕ್ರಮ ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್, ಕಾನೂನು ವಿವಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಡಿ.20ಕ್ಕೆ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಕ್ಕೆ ಬಾಕಿ ಇರುವ ಸಂದರ್ಭದಲ್ಲಿ ಕುಲಪತಿಗಳು ಡಿ.15ಕ್ಕೆ ತರಾತುರಿಯಲ್ಲಿ, ಹಠಕ್ಕೆ ಬಿದ್ದು ಪರೀಕ್ಷೆ ದಿನಾಂಕ ಘೋಷಣೆ ಮಾಡಿದ್ದು ಏಕೆ ಪ್ರಶ್ನಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಸಾದ್ ಅಬ್ಬಯ್ಯ, ಕುಲಪತಿಗಳ ವಿರುದ್ಧ ಹಲವು ಆರೋಪಗಳಿದ್ದು, ಅವರು ತರಾತುರಿಯಲ್ಲಿ ಕಾನೂನು ವಿವಿ ಪರೀಕ್ಷೆ ದಿನಾಂಕ ಪ್ರಕಟಿಸಿದ್ದು, ಈ ಬಗ್ಗೆ ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆಗೆ ಬಾಕಿ ಇದೆ. 26 ಸಾವಿರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದರಲ್ಲಿ ಅಡಗಿದ್ದು, ಸರಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಆಗ್ರಹಿಸಿದರು.







