ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ವಿರೋಧಿಸುವ ಸ್ವಾಮೀಜಿಗಳನ್ನು ಬಂಧಿಸಿ: ನಿರಂಜನಾರಾಧ್ಯ

ಬೆಂಗಳೂರು, ಡಿ.14: ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು ಕಡೆಗಣಿಸಿ, ಕೆಲವು ಮಠಾಧೀಶರು ಮಕ್ಕಳ ಪೌಷ್ಟಿಕತೆಯ ಮೂಲಭೂತ ಹಕ್ಕನ್ನು ಕಸಿಯಲು ಹೊರಟಿರುವುದು ಸಂವಿಧಾನಬಾಹಿರವಾಗಿದ್ದು, ಅವರನ್ನು ಬಂಧಿಸಬೇಕು ಎಂದು ಎಸ್.ಡಿ.ಎಮ್.ಸಿ. ಸಮನ್ವಯ ವೇದಿಕೆಯ ಅಭಿವೃದ್ಧಿ ಶಿಕ್ಷಣ ತಜ್ಞ ಹಾಗು ಮಹಾ ಪೋಷಕ ಡಾ. ನಿರಂಜನಾರಾಧ್ಯ. ವಿ.ಪಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಯಾರು ಏನನ್ನು ತಿನ್ನಬೇಕು ಎಂಬುದು ವೈಯಕ್ತಿಕ ಹಕ್ಕಾಗಿದ್ದು, ಇದಕ್ಕೆ ನಿರ್ಬಂಧವೇರಿದರೆ, ಸಂವಿಧಾನದ 21, 39 (ಎಫ್), 45 ಮತ್ತು 47 ವಿಧಿಗಳಿಗೆ ಧಕ್ಕೆಯಾಗುತ್ತದೆ. ಆದುದರಿಂದ ಮಕ್ಕಳ ಪೌಷ್ಟಿಕತೆಯನ್ನು ಹೆಚ್ಚಿಸಲು ಮೊಟ್ಟೆ ವಿತರಣೆ ಮಾಡಬೇಕಾಗಿದೆ. ಇದನ್ನು ಧರ್ಮದ ಹೆಸರಿನಲ್ಲಿ ವಿರೋಧಿಸುವ ಸ್ವಾಮೀಜಿಗಳನ್ನು ಬಂಧಿಸುವಂತೆ ಅವರು ತಿಳಿಸಿದ್ದಾರೆ.
ಪ್ರೋಟಿನ್‍ಯುಕ್ತ ಆಹಾರ ನಿರಂತರವಾಗಿ ದೊರೆಯದೇ ಇರುವುದರಿಂದ ಅವರ ದೈಹಿಕ, ಮಾನಸಿಕ ಹಾಗು ಬೌದ್ಧಿಕ ಬೆಳವಣಿಗೆಯು ಕುಂಠಿತವಾಗುತ್ತದೆ. ಆದುದರಿಂದ ಮಕ್ಕಳಿಗೆ ಮೊಟ್ಟೆ ನೀಡಬೇಕು ಎಂದು ಹಲವಾರು ಸಂಶೋಧನೆಗಳು ತಿಳಿಸಿವೆ. ಅಲ್ಲದೆ, ಈ ವಿಷಯದಲ್ಲಿ ಅಧ್ಯಯನ ನಡೆಸಲು ನೇಮಕವಾಗಿದ್ದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಸಮಿತಿಯ ವರದಿ ಇದನ್ನು ಶಿಫಾರಸ್ಸು ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ಶಾಲಾ ಮಕ್ಕಳಿಗಾಗಿ ಮೊಟ್ಟೆ ವಿತರಣೆ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಾಗಲಿ ಅಥವಾ ಬದಲಾಯಿಸುವುದಾಗಲಿ ಸರಕಾರ ಯೋಚಿಸಬಾರದು. ಬದಲಿಗೆ ಈ ದೇಶ ವಿಭಜಕ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಬೇಕು. ಹಾಗೆಯೇ ಸರಕಾರಿ ಯೋಜನೆಗಳಿಗೆ ಅಡ್ಡಿಯಾದರೆ, ಸಾರ್ವಜನಿಕರ ಕಾಣಿಕೆಯಿಂದ ಕಟ್ಟಿರುವ ಮಠಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.







