ವಿಧಾನಸಭಾ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಕುವ ವಿಚಾರಕ್ಕೆ ಜಟಾಪಟಿ

ಬೆಳಗಾವಿ, ಡಿ. 14: ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿಧಾನಸಭಾ ಸಭಾಂಗಣದಲ್ಲಿ ಹಾಕಬೇಕು ಎಂಬ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಆಗ್ರಹಿಸಿದ್ದು ಕೆಲಕಾಲ ಸ್ಪೀಕರ್, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.
ಮಂಗಳವಾರ ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡ ಕೂಡಲೇ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಅನ್ನದಾನಿ, ಎರಡು ವರ್ಷಗಳ ಹಿಂದೆ ನಡೆದ ಅಧಿವೇಶನದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲು ಅಂದಿನ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು. ಈವರೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಫೋಟೋ ಹಾಕದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ನೀವು ಮನಸೋ ಇಚ್ಛೆ ವಿಷಯ ಪ್ರಸ್ತಾಪಿಸಲು ಸಾಧ್ಯವಿಲ್ಲ. ನಿಮಗೆ ಇಷ್ಟ ಬಂದ ರೀತಿ ಎದ್ದು ನಿಂತು ಪ್ರಶ್ನೆ ಕೇಳಲು ಪ್ರಾರಂಭಿಸಿದರೆ ಸಭೆ ನಿಯಮಾವಳಿ ಪ್ರಕಾರ ನಡೆಯಬೇಕೋ.. ಇಲ್ಲ ಮನಸೋ ಇಚ್ಛೆ ನಡೆಯಬೇಕೋ ಎಂದು ಅನ್ನದಾನಿ ವಿರುದ್ಧ ಕಿರಿಕಾರಿದರು.
ಆದರೆ ಶಾಸಕ ಅನ್ನದಾನಿ ತನ್ನ ಆಸನದಲ್ಲಿ ಕುಳಿತುಕೊಳ್ಳಲೇ ಇಲ್ಲ. ನೀವು ಯಾವ ವಿಷಯವನ್ನು ಪ್ರಸ್ತಾಪಿಸಬೇಕು ಎನ್ನುತ್ತಿದ್ದಿರೋ ಅದಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಮೊದಲೇ ಅವಕಾಶ ಪಡೆದು ಪ್ರಸ್ತಾಪಿಸಬೇಕಾಗುತ್ತದೆ ಎಂದು ಸ್ಪೀಕರ್ ತಿಳಿಸಿದರು.
ಸ್ಪೀಕರ್ ಎಷ್ಟೇ ಸಮಾಧಾನಪಡಿಸಿದರೂ ಏರಿದ ಧ್ವನಿಯಲ್ಲಿ ಅನ್ನದಾನಿ ಅಂಬೇಡ್ಕರ್ ಫೋಟೋ ಹಾಕಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಇದರಿಂದ ಆಕ್ರೋಶಗೊಂಡ ಕಾಗೇರಿ ನಾನು ನಿಮ್ಮೆಲ್ಲರಿಗೆ ಸಾವಿರ ಸಲ ಹೇಳಿದ್ದೇನೆ. ನಾನು ಅಶಿಸ್ತು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಡಾ.ಅನ್ನದಾನಿ ಅವರೇ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದೀರಿ. ಸದನಕ್ಕೆ ಘನತೆ, ಗೌರವ ಇದೆ ಅನ್ನೋದು ಗೊತ್ತಿಲ್ವೇ. ನಿಮ್ಮ ಮುಂದೆ ಚಿಕ್ಕವರಾಗಿ ಕೈ ಮುಗಿದು ಕೇಳುತ್ತೇನೆ. ಯಾವುದೇ ವಿಷಯ ಪ್ರಸ್ತಾಪಿಸಬೇಕಾದರೆ ನೀವು ನಮ್ಮೊಂದಿಗೆ ಚರ್ಚಿಸಿ ಪ್ರಸ್ತಾಪಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಈ ಹಂತದಲ್ಲಿ ಎದ್ದುನಿಂತ ಡಾ.ಜಿ.ಪರಮೇಶ್ವರ್, ಅಂಬೇಡ್ಕರ್ ಅವರ ಫೋಟೋ ಬೆಂಗಳೂರಿನ ವಿಧಾನಸೌಧದಲ್ಲಿ ಹಾಕಲಾಗಿದೆ. ಅದೇ ಮಾದರಿಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿಯೂ ಅಂಬೇಡ್ಕರ್ ಭಾವಚಿತ್ರ ಹಾಕಬೇಕು ಎಂದು ಒತ್ತಾಯ ಮಾಡಿದರು.
ಬಳಿಕ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕಾಗೇರಿ, ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ವಿಧಾನಸಭೆ ಸಭಾಂಗಣದಲ್ಲಿ ಹಾಕಲು ಯಾವುದೇ ವಿವಾದ ಇಲ್ಲ. ಉಳಿದ ಯಾವ ಫೋಟೋಗಳನ್ನು ಹಾಕಬೇಕೆಂಬುದರ ಮಾಹಿತಿ ಕಲೆ ಹಾಕಲಾಗುತ್ತದೆ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೆಂಗಳೂರಿನಂತೆ ಹಾಕಲಾಗುವುದು ಎಂದು ಪ್ರಕಟಿಸಿದ್ದರಿಂದ ವಿವಾದಕ್ಕೆ ತೆರೆಬಿತ್ತು.







