ವಿಧಾನ ಪರಿಷತ್ ಚುನಾವಣೆ: ಬಿಜೆಪಿ-ಕಾಂಗ್ರೆಸ್ ನಡುವೆ ಸಮಬಲದ ಗೆಲುವು
ಬಿಜೆಪಿ-11, ಕಾಂಗ್ರೆಸ್-11, ಜೆಡಿಎಸ್-02, ಪಕ್ಷೇತರ -01

ಬೆಂಗಳೂರು, ಡಿ.14: ವಿಧಾನ ಪರಿಷತ್ತಿನ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬಿಜೆಪಿ ತನ್ನ ಸ್ಥಾನ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದರೆ, ಜೆಡಿಎಸ್ ಭಾರಿ ನಷ್ಟ ಅನುಭವಿಸಿದೆ. ಕಾಂಗ್ರೆಸ್ ಕೂಡ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ.
ಬಿಜೆಪಿ 11 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ 2ರಲ್ಲಿ ಗೆಲುವು ಸಾಧಿಸಿದೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಅವರು ಗೆಲುವು ಸಾಧಿಸಿದ್ದಾರೆ.
ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಯಾ ಕ್ಷೇತ್ರಗಳ ಶಾಸಕರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತ ಚಲಾಯಿಸಿದ್ದರು.
ಈ ಚುನಾವಣಾ ಕಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‍ನ ತಲಾ 20 ಅಭ್ಯರ್ಥಿಗಳು ಸೇರಿ ಒಟ್ಟು 90 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚಿಕ್ಕಮಗಳೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗಾಯತ್ರಿ ಶಾಂತೇಗೌಡ ಮಹಿಳಾ ಅಭ್ಯರ್ಥಿಯಾಗಿದ್ದು, ಅವರು ಸೋಲನ್ನು ಅನುಭವಿಸಿದ್ದಾರೆ.
ಎಚ್‍ಡಿಡಿ ಮೊಮ್ಮಗನಿಗೆ ಗೆಲುವು: ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಡಾ.ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ ಅವರು ಸೋಲನ್ನು ಅನುಭವಿಸಿದ್ದಾರೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಂ.ಕೆ.ಪ್ರಾಣೇಶ್ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಕಡಿಮೆ ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದಾರೆ.
ಸಾವಿರ ಕೋಟಿ ಒಡೆಯ ಬಾಬುಗೆ ಸೋಲು: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ನಗರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಗೋಪಿನಾಥ್ ರೆಡ್ಡಿ ವಿಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್‍ನ ಸಾವಿರ ಕೋಟಿ ಆಸ್ತಿ ಒಡೆಯ ಯೂಸೂಫ್ ಶರೀಫ್(ಕೆಜಿಎಫ್) ಬಾಬು ಅವರು ಸೋಲುಂಡಿದ್ದಾರೆ.
ಸಲೀಂ ಅಹ್ಮದ್‍ಗೆ ಗೆಲುವು: ಧಾರವಾಡ-ಹಾವೇರಿ-ಗದಗ ದ್ವಿಸದಸ್ಯ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಸಲೀಂ ಅಹ್ಮದ್‍ಗೆ ಮತ್ತು ಬಿಜೆಪಿಯ ಪ್ರದೀಪ್ ಶೆಟ್ಟರ್ ಗೆಲುವು ಸಾಧಿಸಿದ್ದಾರೆ.
ಎಲಿಮಿನೇಷನ್ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿಗೆ ಜಯ: ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು-ಚಾಮರಾಜನಗರ ಕ್ಷೇತ್ರದ ಫಲಿತಾಂಶದಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳಿಗೆ ಜೆಡಿಎಸ್, ಬಿಜೆಪಿ ಮಧ್ಯೆ ಪೈಪೋಟಿ ಏರ್ಪಟ್ಟು ಕೊನೆಗೂ ಜೆಡಿಎಸ್ ಅಭ್ಯರ್ಥಿ ಸಿಎನ್ ಮಂಜೇಗೌಡ ಎಲಿಮಿನೇಷನ್ ಸುತ್ತಿನಲ್ಲಿ ಜಯಸಾಧಿಸಿದ್ದಾರೆ.
ಕೆ.ಸಿ.ಕೊಂಡಯ್ಯಗೆ ಸೋಲು: ಬಳ್ಳಾರಿ ಕ್ಷೇತ್ರದಲ್ಲಿ ಹಾಲಿ ಸದಸ್ಯ ಕೆ.ಸಿ.ಕೊಂಡಯ್ಯ ಸೋಲು ಕಂಡಿದ್ದು, ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಗೆಲುವು ಸಾಧಿಸಿದ್ದಾರೆ.
ಲಖನ್‍ಗೆ ಗೆಲುವು: ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಗೆಲುವು ಲಭಿಸಿದ್ದು, ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರು ಸೋಲನ್ನು ಅನುಭವಿಸಿರುವುದು, ಬಿಜೆಪಿ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಹೆಬ್ಬಾಳ್ಕರ್ ಸಹೋದರನಿಗೆ ಗೆಲುವು: ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರು ಗೆಲುವು ಸಾಧಿಸಿದ್ದು, ಇವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಿರಿಯ ಸಹೋದರರಾಗಿದ್ದಾರೆ.
ಆಟೋ ಹತ್ತಿ ಹೊರಟ ಕೆಜಿಎಫ್ ಬಾಬು
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಆಗಿದ್ದ ಯೂಸುಫ್ ಷರೀಫ್(ಕೆಜಿಎಫ್ ಬಾಬು) ಸೋತಿದ್ದು, ಫಲಿತಾಂಶ ಹೊರ ಬೀಳುತ್ತಿದ್ದಂತೆ ಕೋಟಿ ಕೋಟಿ ಒಡೆಯ ಆಟೊ ರಿಕ್ಷಾ ಹಿಡಿದು ನಿರ್ಗಮಿಸಿದ್ದು ಎಲ್ಲರ ಗಮನ ಸೆಳೆಯಿತು.
ಕೋರ್ಟ್ ಮೋರೆ ಹೋದ ಗಾಯತ್ರಿ ಶಾಂತೇಗೌಡ
ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಅವರು ಕಡಿಮೆ ಮತಗಳ ಅಂತರದಿಂದ ಕಾಂಗ್ರೆಸ್‍ನ ಗಾಯತ್ರಿ ಶಾಂತೇಗೌಡ ಅವರನ್ನು ಸೋಲಿಸಿದ್ದಾರೆ. ಗಾಯತ್ರಿ ಅವರು ಫಲಿತಾಂಶವನ್ನು ಪ್ರಕಟಿಸದಂತೆ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ತಮಗೆ ಕಡಿಮೆ ಮತಗಳು ಬಂದಿವೆ ಎಂದು ಗಾಯತ್ರಿ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಗೆದ್ದ ಕ್ಷೇತ್ರಗಳು
ಬೀದರ್ –ಭೀಮಾರಾಮ್ ಪಾಟೀಲ್
ಮಂಡ್ಯ –ಗೂಳೀಗೌಡ
ರಾಯಚೂರು – ಶರಣಗೌಡ ಬಯ್ಯಾಪುರ
ಬೆಂಗಳೂರು ಗ್ರಾಮಾಂತರ –ಎಂ.ಎಸ್.ರವಿ
ಧಾರವಾಡ (ದ್ವಿಸದಸ್ಯ)–ಸಲೀಂ ಅಹಮ್ಮದ್
ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್ ಭಂಡಾರಿ
ಬೆಳಗಾವಿ (ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ
ವಿಜಯಪುರ (ದ್ವಿಸದಸ್ಯ) –ಸುನೀಲ್‌ಗೌಡ ಪಾಟೀಲ
ತುಮಕೂರು– ರಾಜೇಂದ್ರ ರಾಜಣ್ಣ
ಮೈಸೂರು- ಡಾ.ಡಿ ತಿಮ್ಮಯ್ಯ
ಕೋಲಾರ- ಎಂ.ಎಲ್ ಅನಿಲ್ ಕುಮಾರ್
--------------------------------------
ಬಿಜೆಪಿ ಗೆದ್ದ ಕ್ಷೇತ್ರಗಳು
ಕೊಡಗು–ಸುಜಾ ಕುಶಾಲಪ್ಪ
ಬೆಂಗಳೂರು– ಗೋಪಿನಾಥ್ ರೆಡ್ಡಿ
ಚಿತ್ರದುರ್ಗ– ಕೆ.ಎಸ್. ನವೀನ್
ಉತ್ತರ ಕನ್ನಡ– ಗಣಪತಿ ಉಳ್ವೇಕರ್
ಬಳ್ಳಾರಿ– ವೈ.ಎಂ.ಸತೀಶ್
ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
ಶಿವಮೊಗ್ಗ –ಡಿ.ಎಸ್.ಅರುಣ್
ಕಲಬುರ್ಗಿ –ಬಿ.ಜಿ.ಪಾಟೀಲ್
ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್ ಪೂಜಾರಿ
ಧಾರವಾಡ (ದ್ವಿಸದಸ್ಯ) –ಪ್ರದೀಪ್ ಶೆಟ್ಟರ್
ವಿಜಯಪುರ (ದ್ವಿಸದಸ್ಯ) –ಪಿ.ಎಚ್.ಪೂಜಾರ
-------------------------------------------------
ಜೆಡಿಎಸ್ ಗೆದ್ದ ಕ್ಷೇತ್ರಗಳು
ಹಾಸನ– ಸೂರಜ್ ರೇವಣ್ಣ
ಮೈಸೂರು(ದ್ವಿಸದಸ್ಯ)- ಸಿ.ಎನ್.ಮಂಜೇಗೌಡ
-------------------------
ಪಕ್ಷೇತರರು ಗೆದ್ದ ಕ್ಷೇತ್ರಗಳು: ಬೆಳಗಾವಿ (ದ್ವಿಸದಸ್ಯ) -ಲಖನ್ ಜಾರಕಿಹೋಳಿ






_0.jpeg)

.jpg)
.jpg)


