ನಾಗಾಲ್ಯಾಂಡ್ ನಾಗರಿಕರ ಹತ್ಯೆ ಪ್ರಕರಣ: ಸೇನೆಯೊಂದಿಗೆ ಸಂಪೂರ್ಣ ಅಸಹಕಾರ ಘೋಷಿಸಿದ ಕೊನ್ಯಾಕ್ ಯೂನಿಯನ್

(ಫೋಟೊ - PTI)
ಕೊಹಿಮಾ,ಡಿ.14: ಕೊನ್ಯಾಕ್ ನಾಗಾ ಬುಡಕಟ್ಟನ್ನು ಪ್ರತಿನಿಧಿಸುವ ಕೊನ್ಯಾಕ್ ಯೂನಿಯನ್ ಸಶಸ್ತ್ರ ಪಡೆಗಳ ವಿರುದ್ಧ ಸಂಪೂರ್ಣ ಅಸಹಕಾರ ಆಂದೋಲನವನ್ನು ಘೋಷಿಸಿದೆ. ವಾರದ ಹಿಂದೆ ನಾಗಾ ಲ್ಯಾಂಡ್ ನ ಮೊನ್ ಜಿಲ್ಲೆಯ ಒಟಿಂಗ್ನಲ್ಲಿ ಕೊನ್ಯಾಕ್ ಬುಡಕಟ್ಟಿಗೆ ಸೇರಿದ್ದ 14 ನಾಗರಿಕರು ಸಶಸ್ತ್ರ ಪಡೆಗಳ ಗುಂಡಿಗೆ ಬಲಿಯಾಗಿದ್ದರು.
ಕೊಲ್ಲಲ್ಪಟ್ಟವರಿಗೆ ನ್ಯಾಯವು ದೊರಕುವವರೆಗೆ ಕೊನ್ಯಾಕದ ಮಣ್ಣಿನಲ್ಲಿ ಭಾರತೀಯ ಸೇನಾಪಡೆಗಳ ವಾಹನಗಳ ಸಂಚಾರ ಮತ್ತು ಗಸ್ತು ತಿರುಗುವಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದಾಗಿ ಕೊನ್ಯಾಕ್ ಯೂನಿಯನ್ ಪ್ರಕಟಿಸಿದೆ. ಮೊನ್ ಜಿಲ್ಲೆಯಲ್ಲಿ ಕೊನ್ಯಾಕ್ ಬುಡಕಟ್ಟು ಪ್ರಾಬಲ್ಯವನ್ನು ಹೊಂದಿದೆ.
ಯಾವುದೇ ಕೊನ್ಯಾಕ್ ಗ್ರಾಮ ಮಂಡಳಿಗಳು, ವಿದ್ಯಾರ್ಥಿಗಳು ಅಥವಾ ಯಾವುದೇ ಸಮಾಜ ಸಶಸ್ತ್ರ ಪಡೆಗಳಿಂದ ಯಾವುದೇ ರೂಪದ ಅಭಿವೃದ್ಧಿ ಪ್ಯಾಕೇಜ್ ಅಥವಾ ನೆರವುಗಳನ್ನು ಸ್ವೀಕರಿಸಬಾರದು ಎಂದು ಕೊನ್ಯಾಕ್ ಯೂನಿಯನ್ ತಾಕೀತು ಮಾಡಿದೆ.
ಮೊನ್ ಜಿಲ್ಲೆಯಲ್ಲಿ ಯಾವುದೇ ಸೇನಾ ಭರ್ತಿ ರ್ಯಾಲಿಗಳಿಗೆ ಅವಕಾಶ ನೀಡುವುದಿಲ್ಲ ಎಂದೂ ಅದು ಪ್ರಕಟಿಸಿದೆ.
ಕೊನ್ಯಾಕ್ ಯೂನಿಯನ್ ಹೊರಡಿಸಿರುವ ಹೇಳಿಕೆಯಲ್ಲಿ,ಜಿಲ್ಲಾ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಮಿಲಿಟರಿ ಮೂಲಶಿಬಿರಗಳ ಸ್ಥಾಪನೆಗೆ ಭೂಮಿ ಹಂಚಿಕೆ ಒಪ್ಪಂದಗಳು ಸೇರಿದಂತೆ ಭಾರತೀಯ ಸೇನೆಯೊಂದಿಗಿನ ಎಲ್ಲ ಸಾರ್ವಜನಿಕ ಸಂಪರ್ಕಗಳನ್ನು ತಕ್ಷಣವೇ ಖಂಡಿಸುವಂತೆ ಸಾಂಪ್ರದಾಯಿಕ ಭೂಮಾಲಿಕರಿಗೆ ನಿರ್ದೇಶ ನೀಡಲಾಗಿದೆ.
ಅಸಮಾಧಾನದ ಸಂಕೇತವಾಗಿ ಎಲ್ಲ ವಾಹನಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಲಾಗುವುದು ಮತ್ತು ಪ್ರತಿಯೊಬ್ಬರೂ ಕಪ್ಪು ಬ್ಯಾಡ್ಜ್ ಗಳನ್ನು ಧರಿಸಲಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.
ಮೊನ್ ಜಿಲ್ಲೆಯೊಳಗೆ ರಾತ್ರಿ ಮಾರುಕಟ್ಟೆಗಳಿಗೆ ಭೇಟಿ,ಪ್ರವಾಸ ಮತ್ತು ಇತರ ಮನರಂಜನಾ ಚಟುವಟಿಕೆಗಳು ಸೇರಿದಂತೆ ಯಾವುದೇ ರೀತಿಯ ವಿರಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆಯೂ ಕೊನ್ಯಾಕ್ ಯೂನಿಯನ್ ಜನರನ್ನು ಆಗ್ರಹಿಸಿದೆ.
ಆದಾಗ್ಯೂ ಮದುವೆಗಳು,ಚರ್ಚ್ ಸಮಾರಂಭಗಳಂತಹ ಪೂರ್ವ ನಿಗದಿತ ಕಾರ್ಯಕ್ರಮಗಳಿಗೆ ನಿರ್ಬಂಧಗಳಿಂದ ವಿನಾಯಿತಿಯನ್ನು ನಿಡಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.