12ನೇ ತರಗತಿಯ ಅಕೌಂಟನ್ಸಿ ಪರೀಕ್ಷೆಯಲ್ಲಿ ಕೃಪಾಂಕಗಳ ನೀಡಿಕೆ ಸುಳ್ಳು ಸುದ್ದಿ: ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.14: ಸೋಮವಾರ ನಡೆದಿದ್ದ 12ನೇ ತರಗತಿಯ ಅಕೌಂಟನ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ದೋಷದಿಂದಾಗಿ ವಿದ್ಯಾರ್ಥಿಗಳಿಗೆ ಆರರವರೆಗೆ ಕೃಪಾಂಕಗಳನ್ನು ನೀಡಲಾಗುತ್ತದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಆಡಿಯೊ ನಂಬದಂತೆ ಸಿಬಿಎಸ್ಇ ಮಂಗಳವಾರ ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಪರೀಕ್ಷಾ ನಿಯಂತ್ರಕರ ಹೆಸರಿನಲ್ಲಿ ಆಡಿಯೊವನ್ನು ಉಲ್ಲೇಖಿಸಿ ಸುಳ್ಳುವರದಿಗಳು ಮಂಡಳಿಯ ಗಮನಕ್ಕೆ ಬಂದಿದೆ. ವರದಿಯಲ್ಲಿನ ವಿಷಯಗಳು ಸಂಪೂರ್ಣ ನಿರಾಧಾರ ಮತ್ತು ಸುಳ್ಳಾಗಿದ್ದು,ಯಾವುದೇ ಸುದ್ದಿಗಾರರು ಈ ಸಂಬಂಧ ಪರೀಕ್ಷಾ ನಿಯಂತ್ರಕರೊಂದಿಗೆ ಮಾತನಾಡಿಲ್ಲ ಹಾಗೂ ಮಂಡಳಿಯು ಇಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರಿಂದ ತಮ್ಮ ಸ್ವಂತ ಹಿತಾಸಕ್ತಿಯಲ್ಲಿ ಇಂತಹ ಅನಧಿಕೃತ ವರದಿಗಳನ್ನು ನಂಬದಂತೆ ಮಂಡಳಿಯು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಸಿಬಿಎಸ್ಇ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
‘ವಿದ್ಯಾರ್ಥಿಗಳೇ ಚಿಂತಿಸಬೇಡಿ. ನೀವು 28ರಿಂದ 31 ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದ್ದರೆ ನೀವು ಸುಮಾರು 38 ಅಂಕಗಳನ್ನು ಗಳಿಸುತ್ತೀರಿ. ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಆರರವರೆಗೆ ಕೃಪಾಂಕಗಳನ್ನು ನೀಡುತ್ತದೆ ’ಎಂದು ಪರೀಕ್ಷಾ ನಿಯಂತ್ರಕರ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೊ ಕ್ಲಿಪ್ ನಲ್ಲಿ ಹೇಳಲಾಗಿದೆ