ಗ್ರಂಥ ಸಂಪಾದನೆ, ಅನುವಾದ ಸಾಹಿತ್ಯಕ್ಕೆ ಬನ್ನಂಜೆ ಕೊಡುಗೆ ಅಮೂಲ್ಯ: ಸಗ್ರಿ ರಾಘವೇಂದ್ರ ಉಪಾಧ್ಯಾಯ
ಉಡುಪಿ: ಏಳುನೂರು ವರ್ಷ ಕಾಲ ಉಡುಪಿಯ ಪಲಿಮಾರು ಮಠದಲ್ಲಿ ಸುರಕ್ಷಿತವಾಗಿದ್ದ ಮಧ್ವಾಚಾರ್ಯರ ತುಳು ಲಿಪಿಯ ಸರ್ವಮೂಲ ಗ್ರಂಥಗಳ ಸಂಪಾದನೆ, ಮಹಾಭಾರತ ತಾತ್ಪರ್ಯ ನಿರ್ಣಯ ವಿಮರ್ಶೆಯ ಸಂಸ್ಕೃತ ಗ್ರಂಥ, ಕಾಳಿದಾಸ, ಭಾಸ, ಬಾಣಭಟ್ಟ, ಶೂದ್ರಕರ ಸಂಸ್ಕೃತ ನಾಟಕಗಳ ಅನುವಾದ ಬನ್ನಂಜೆ ಗೋವಿಂದಾಚಾರ್ಯರ ಮಹತ್ವದ ಕೊಡುಗೆಗಳಾಗಿವೆ ಎಂದು ಉಡುಪಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಸಗ್ರಿ ರಾಘವೇಂದ್ರ ಉಪಾಧ್ಯಾಯ ಹೇಳಿದ್ದಾರೆ.
ಉಡುಪಿಯ ರಥಬೀದಿ ಗೆಳೆಯರು, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಮತ್ತು ಸಂಸ್ಕೃತ ಭಾರತಿ ಏರ್ಪಡಿಸಿದ್ದ ಬನ್ನಂಜೆ ಕೃತಿ ಸ್ಮತಿ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಬನ್ನಂಜೆಯವರ ಇಂಥ ಕೊಡುಗೆಗಳ ಮಹತ್ವ ಗುರುತಿಸುವ, ವಿಮರ್ಶಿಸುವ ಗೋಷ್ಠಿಗಳು ಇನ್ನಷ್ಟು ನಡೆಯಬೇಕಾಗಿದೆ ಎಂದು ರಾಘೇಂದ್ರ ಉಪಾಧ್ಯಾಯ ಅಭಿಪ್ರಾಯಪಟ್ಟರು.
ಡಾ.ರಾಘವೇಂದ್ರ ರಾವ್ ಕನ್ನಡ ಅನುವಾದ ಸಾಹಿತ್ಯಕ್ಕೆ ಬನ್ನಂಜೆ ನೀಡಿದ ಕೊಡುಗೆಗಳ ಸೊಗಸನ್ನು ವಿವರಿಸಿದರು. ಎಚ್.ಎನ್. ನಟರಾಜ್, ಶಂಭು ಭಟ್,ಪ್ರಣಾದ ರಾವ್, ಸುರಭಿ ಕೊಡವೂರು ಬನ್ನಂಜೆ ಅವರ ಗೀತೆಗಳನ್ನು ಹಾಡಿದರು.
ಸಂಸ್ಕೃತ ಭಾರತಿಯ ಸುಧಾ ಶೆಣೈ, ರಥಬೀದಿ ಗೆಳೆಯರ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ಶಕುಂತಲಾ ಶೆಣೈ ಸ್ವಾಗತಿಸಿ, ಜಿ.ಪಿ.ಪ್ರಭಾಕರ ವಂದಿಸಿದರು.





