ಕ್ರೈಸ್ತರ ವಿರುದ್ಧ ಹಿಂದುತ್ವ ದಾಳಿ: ಮಾಧ್ಯಮಗಳು ಸಂತ್ರಸ್ತರನ್ನೇ ಅಪರಾಧಿಗಳಂತೆ ತೋರಿಸುತ್ತಿವೆ; ಆಕರ್ ಪಟೇಲ್

ಹಿರಿಯ ಪತ್ರಕರ್ತ ಆಕರ್ ಪಟೇಲ್
ಬೆಂಗಳೂರು, ನ 14 : ಕ್ರೈಸ್ತ ಪ್ರಾರ್ಥನಾಲಯಗಳ ಮೇಲಿನ ದಾಳಿ ಪ್ರಕರಣಗಳಲ್ಲಿ ಮಾಧ್ಯಮಗಳು ಋಣಾತ್ಮಕ ಪಾತ್ರ ವಹಿಸಿವೆ. ಅವುಗಳ ಕವರೇಜ್ ಸಂತ್ರಸ್ತರನ್ನೇ ಗುರಿ ಮಾಡಿಕೊಂಡಿರುತ್ತದೆ. ಅವರೇ ಅಪರಾಧಿಗಳು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡ ಧಾಟಿಯಲ್ಲಿರುತ್ತದೆ. ಧಾರ್ಮಿಕ ಚಟುವಟಿಕೆಯನ್ನು ಏನೋ ಅಪರಾಧ ನಡೆಯುತ್ತಿದೆ ಎಂಬಂತೆ ಬಿಂಬಿಸಲಾಗುತ್ತದೆ ಎಂದು ಹಿರಿಯ ಪತ್ರಕರ್ತ, ಅಂಕಣಕಾರ ಆಕರ್ ಪಟೇಲ್ ಹೇಳಿದ್ದಾರೆ.
ಅವರು ಮಂಗಳವಾರ ಪ್ರೆಸ್ ಕ್ಲಬ್ ನಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ - ಕರ್ನಾಟಕ, ವಕೀಲರು ಮತ್ತು ಕಾರ್ಯಕರ್ತರು ಚರ್ಚ್ ಗಳ ಮೇಲಿನ ದಾಳಿ ಕುರಿತು ಸಿದ್ಧಪಡಿಸಿರುವ ವರದಿ ' ಧರ್ಮಾಚರಣೆಯ ಅಪರಾಧಿಕರಣ ' ಬಿಡುಗಡೆ ಬಳಿಕ ಮಾತನಾಡುತ್ತಿದ್ದರು.
ನಾನು ಪತ್ರಕರ್ತನಾಗಿ ಈ ಮಾತು ಹೇಳುತ್ತಿದ್ದೇನೆ. ಮಾಧ್ಯಮಗಳು ದಾಳಿಗೊಳಗಾದ ಜನರ ಧಾರ್ಮಿಕ ಹಕ್ಕುಗಳನ್ನು ಸಂಪೂರ್ಣ ಕಡೆಗಣಿಸುತ್ತವೆ. ಸುದ್ದಿಯಲ್ಲಿ ಅದರ ವಿಷಯವೇ ಇರುವುದಿಲ್ಲ. ಪ್ರಾರ್ಥನಾಲಯದ ಮೇಲೆ ದಾಳಿ ನಡೆದಿದ್ದು, ಅಲ್ಲಿದ್ದ ಜನರ ಮೇಲೆ ಹಲ್ಲೆಯಾಗಿರುವ ಬಗ್ಗೆ ಯಾವುದೇ ಕಾಳಜಿ ಸುದ್ದಿಯಲ್ಲಿ ಕಾಣುವುದಿಲ್ಲ. ದಾಳಿ ಮಾಡಿದ ಕಡೆಯವರ ಆರೋಪಗಳನ್ನೇ ಸುದ್ದಿಯಲ್ಲಿ ಹೇಳಲಾಗುತ್ತದೆ. ದಾಳಿಯಲ್ಲಿ ಪೋಲೀಸರ ಪಾತ್ರದ ಬಗ್ಗೆಯೂ ಪತ್ರಕರ್ತರು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂಬುದು ವರದಿಯಲ್ಲಿ ಎದ್ದು ಕಾಣುತ್ತದೆ ಎಂದವರು ಹೇಳಿದರು.
ದಾಳಿ ಮಾಡಿದವರು ಕಾನೂನು ಉಲ್ಲಂಘನೆ ಮಾಡಿದ್ದನ್ನು ಯಾವ ಪತ್ರಕರ್ತರೂ ಪ್ರಶ್ನಿಸುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನದ ಕರಡಿನಲ್ಲಿ ಫ್ರೀಲಿ ಕನ್ವರ್ಟ್ ( ಮುಕ್ತವಾಗಿ ಮತಾಂತರವಾಗಬಹುದು ) ಎಂದು ಬಳಸಿದ್ದನ್ನು ಬಳಿಕ ಫ್ರೀಲಿ ಪ್ರೊಪಗೇಟ್ ( ಮುಕ್ತವಾಗಿ ಪ್ರಚಾರ ಮಾಡಬಹುದು) ಎಂದು ಬದಲಾಯಿಸಲಾಯಿತು. ಅದನ್ನು ಅವರು ಮುಟ್ಟಲಿಲ್ಲ. ಏಕೆಂದರೆ ಇವೆರಡೂ ಒಂದೇ ಅರ್ಥ ಕೊಡುತ್ತವೆ ಎಂದು ಅವರು ನಂಬಿದ್ದರು. ಈ ದೇಶದ ಕ್ರೈಸ್ತರು ಸಂವಿಧಾನ ಸಭೆಯಲ್ಲಿ ಫ್ರಾಂಕ್ ಆಂಟನಿ ಮೂಲಕ ಸ್ಪಷ್ಟವಾಗಿ ಆಗ್ರಹಿಸಿದ್ದ ಹಕ್ಕು ಆಗಿತ್ತದು. ಅದನ್ನು ನಾವು ಕಳೆದ ಹಲವಾರು ವರ್ಷಗಳಲ್ಲಿ ಕೋರ್ಟುಗಳು ಮತ್ತು ಶಾಸನಸಭೆಗಳ ಮೂಲಕ ಇಲ್ಲವಾಗಿಸುತ್ತಿದ್ದೇವೆ. ಮೊದಲು ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಈ ದಾಳಿಗಳು ಈಗ ದಕ್ಷಿಣಕ್ಕೆ ಬಂದಿವೆ. ಇವುಗಳಿಗೆ ಇಲ್ಲಿನ ಮಾಧ್ಯಮಗಳು ಸೂಕ್ತ ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ. ನಾವೆಲ್ಲ ಪತ್ರಕರ್ತರು ಈ ಬಗ್ಗೆ ಜಾಗೃತರಾಗಬೇಕಿದೆ ಎಂದು ಆಕರ್ ಹೇಳಿದರು.
ದ್ವೇಷ ಭಾಷಣ. ಕಾನೂನಿನಲ್ಲಿ ಜನಾಂಗೀಯ, ಜಾತೀಯ ನಿಂದನೆ ಹಾಗು ಹಿಂಸೆಗೆ ಪ್ರಚೋದನೆ ನೀಡುವ ಮಾತಿಗೆ ಅವಕಾಶವಿಲ್ಲ. ಆದರೆ ಇದನ್ನು ಮಾಧ್ಯಮಗಳು ಗಂಭೀರವಾಗಿ ತೆಗೆದುಕೊಂಡಿಲ್ಲ. ದಾಳಿ ಪ್ರಕರಣಗಳನ್ನು ಭಾರೀ ಅಬ್ಬರದೊಂದಿಗೆ ತೋರಿಸಿ ದಾಳಿಗೆ ಒಳಗಾದವರನ್ನೇ ಅಪರಾಧಿಗಳಂತೆ ಬಿಂಬಿಸಲಾಗುತ್ತದೆ. ದಾಳಿಯ ಬಳಿಕ ಅವರು ಸಹಜ ಜೀವನಕ್ಕೆ ಮರಳದಂತೆ ಮಾಡಲಾಗುತ್ತದೆ. ಇದು ನಿಲ್ಲಬೇಕು. ಈ ಬಗ್ಗೆ ಮಾಧ್ಯಮಗಳು ಜಾಗೃತಗೊಳ್ಳಬೇಕು ಎಂದು ಆಕರ್ ಪಟೇಲ್ ಕರೆ ನೀಡಿದರು.








