ಸೋನಿಯಾ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಸಭೆ,ಸಂಸತ್ತಿನ ಕಾರ್ಯತಂತ್ರದ ಕುರಿತು ಚರ್ಚೆ

ಹೊಸದಿಲ್ಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಡಿಎಂಕೆಯ ಟಿ.ಆರ್. ಬಾಲು ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ನಾಯಕರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆ ಸೇರಿ ಈಗ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಸರಕಾರವನ್ನು ಪ್ರಶ್ನಿಸುವ ಕಾರ್ಯತಂತ್ರದ ಕುರಿತು ಚರ್ಚಿಸಿದರು.
ಹಿಂದಿನ ಅಧಿವೇಶನದಲ್ಲಿ ಸದನದಲ್ಲಿ 'ಅಶಿಸ್ತಿನ' ವರ್ತನೆಗಾಗಿ ಅಮಾನತುಗೊಂಡಿರುವ 12 ರಾಜ್ಯಸಭಾ ಸದಸ್ಯರ ಸ್ಥಾನಮಾನದ ಕುರಿತು ಸರಕಾರ ಹಾಗೂ ಪ್ರತಿಪಕ್ಷಗಳು ವಾಗ್ವಾದ ನಡೆಸುತ್ತಿರುವ ಸಮಯದಲ್ಲಿ ಈ ಸಭೆ ನಡೆದಿದೆ. ರಾಜ್ಯಸಭಾ ಸದಸ್ಯರು ಕ್ಷಮೆಯಾಚಿಸಬೇಕು ಎಂದು ಸರಕಾರ ಹೇಳಿದರೆ, ಆಡಳಿತ ಪಕ್ಷವು ಚರ್ಚೆಯಿಂದ ದೂರ ಸರಿಯುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಸಂಸದ ಟಿ.ಆರ್. ಬಾಲು, ಶಿವಸೇನೆ ಸಂಸದ ಸಂಜಯ್ ರಾವತ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ.
ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧ ಪ್ರತಿಪಕ್ಷವನ್ನು ಮುನ್ನಡೆಸುವ ಕಾಂಗ್ರೆಸ್ ಸಾಮರ್ಥ್ಯದ ಕುರಿತು ತೃಣಮೂಲ ಕಾಂಗ್ರೆಸ್ ಪ್ರಶ್ನಿಸಿದ ಸಂದರ್ಭದಲ್ಲಿ ಈ ಸಭೆ ನಡೆದಿದೆ.
ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಇಂತಹ ಹಲವು ಸಭೆಗಳು ನಡೆಯಬಹುದು ಎಂದು ಮೂಲಗಳು ತಿಳಿಸಿವೆ.