ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮಿ
ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೈಬಿಡದಿದ್ದರೆ ಸುವರ್ಣಸೌಧ ಚಲೋ

ಬೀದರ್, ಡಿ.14: ಸರಕಾರವು ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪೌಷ್ಟಿಕಾಂಶದ ಹೆಸರಿನಲ್ಲಿ ಮೊಟ್ಟೆ ತಿನ್ನಿಸುವುದನ್ನು ಕೈ ಬಿಡಬೇಕು. ಶಾಲಾ ಮಕ್ಕಳಿಗೆ ಮೊಟ್ಟೆ ಸ್ಥಗಿತಗೊಳಿಸಲು ಸಾಧ್ಯವೇ ಇಲ್ಲ ಎಂದರೆ ಸಸ್ಯಾಹಾರಿ ಸಮುದಾಯಗಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕು.ಇಲ್ಲವಾದಲ್ಲಿ, ಭಾರತ ಸಸ್ಯಾಹಾರಿಗಳ ಒಕ್ಕೂಟವು ಡಿ. 20 ರಂದು ಬೆಳಗಾವಿಯಲ್ಲಿ ಸಂತ ಸಮಾವೇಶ ಮತ್ತು ಸುವರ್ಣ ಸೌಧ ಚಲೋ ಚಳವಳಿ ನಡೆಸಲಾಗುತ್ತದೆ ಎಂದು ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ಪ್ರಧಾನ ಸಂಚಾಲಕ ದಯಾನಂದ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ನೀಡುವ ಬದಲಾಗಿ ಮೊಟ್ಟೆಗಿಂತಲೂ ಅಧಿಕ ಪೋಷಕಾಂಶಗಳನ್ನು ಒಳಗೊಂಡಿರುವ ಸತ್ವಯುತ, ಸರ್ವಸಮ್ಮತ, ಏಕರೂಪದ ಶುದ್ಧ ಸಸ್ಯಾಹಾರ ಪದಾರ್ಥ ನೀಡಬೇಕು. ಹಲವು ಮಠಾಧೀಶರು ಸಿಎಂಗೆ ಮನವಿ ಮಾಡಿದರೂ ಮೊಟ್ಟೆ ಸ್ಥಗಿತಗೊಳಿಸಲಿಲ್ಲ. ಆದುದರಿಂದ ಹೋರಾಟವು ಅನಿವಾರ್ಯವಾಗಿದೆ ಎಂದರು.
ಮೊಟ್ಟೆಗೆ ಪರ್ಯಾಯವಾಗಿ ಬಾಳೆ ಹಣ್ಣು ನೀಡಲಾಗುವುದು ಎಂಬ ಆಲೋಚನೆಯನ್ನು ಸರಕಾರವು ಕೈಬಿಡಬೇಕು. ಏಕೆಂದರೆ, ಒಂದೇ ಶಾಲೆಯಲ್ಲಿ ಓದುವ ಎಲ್ಲಾ ವಿದ್ಯಾರ್ಥಿಗಳು ಒಂದೇ ಪಂಕ್ತಿಯಲ್ಲಿ ಊಟ ಮಾಡುತ್ತಾರೆ. ಆಗ ಮೊಟ್ಟೆ ಸೇವನೆ ಮಾಡುವ ಮಕ್ಕಳ ಜತೆ ಊಟ ಮಾಡುವಾಗ ಸಸ್ಯಾಹಾರಿ ಮಕ್ಕಳ ಮೇಲೆ ಉಂಟಾಗುವ ದೂರಗಾಮಿ ಪರಿಣಾಮ ಬೀರುತ್ತದೆ. ಹಾಗೆಯೇ, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಮಕ್ಕಳ ನಡುವಿನ ಸಂಕುಚಿತ ಭಾವನೆಗಳು ಮೂಡುತ್ತವೆ ಎಂದು ಸ್ಪಷ್ಟಪಡಿಸಿದ ಅವರು, ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೊಟ್ಟೆ ವಿತರಣೆಯನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಲಿಂಗಾಯತ, ಜೈನ, ಬ್ರಾಹ್ಮಣ, ವೈಶ್ಯ ಸಮುದಾಯಗಳಿಗೆ ಪ್ರತ್ಯೇಕ ಶಾಲೆಗಳನ್ನು ತೆರಯಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ಪ್ರಧಾನ ಸಂಘಟಕ ಚನ್ನಬಸವಾನಂದ ಸ್ವಾಮಿ, ಬಸವಕಲ್ಯಾಣದ ಬಸವ ಮಹಾಮನೆಯ ಸಿದ್ಧರಾಮೇಶ್ವರ ಮಹಾಸ್ವಾಮಿ, ಮಾತೆ ಸತ್ಯಾದೇವಿ, ಸುನಂದಾದೇವಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ವೈಜನಾಥ ಕಮಠಾಣೆ, ಶಿವರಾಜ ಪಾಟೀಲ್ ಅತಿವಾಳ ಹಾಗೂ ಮತ್ತಿತರರು ಇದ್ದರು.







