ಮತಾಂತರ ನಿಷೇಧ ಕಾಯ್ದೆ ಜಾರಿ ವಿರೋಧಿಸಿ ದಲಿತ ಒಕ್ಕೂಟಗಳಿಂದ ಡಿ.16ಕ್ಕೆ ಸುವರ್ಣಸೌಧ ಮುತ್ತಿಗೆ

ಬೆಂಗಳೂರು, ಡಿ.14: ದಶಕಗಳಿಂದ ದಲಿತ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು ಎಂದು ರಾಜ್ಯದ ಎಲ್ಲಾ ದಲಿತರು ಒಕ್ಕೊರಲಿನಿಂದ ಹೋರಾಟ ನಡೆಸುತ್ತಿದ್ದರೂ, ಇತ್ತೀಚೆಗೆ ಚರ್ಚೆಯಾಗುತ್ತಿರುವ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸರಕಾರವು ಮುಂದಾಗುತ್ತಿದೆ. ಆದುದರಿಂದ ದಲಿತರ ಪರವಾಗಿ ಭೂಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್)ಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ, ಡಿ.16ರಂದು ಸವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಪ್ರೆಸ್ ಕ್ಲಬ್‍ನಲ್ಲಿ ಮಾತನಾಡಿದ ಅವರು, 1978ರ ಕರ್ನಾಟಕ ಎಸ್‍ಸಿ, ಎಸ್‍ಟಿ ಭೂಪರಭಾರೆ ನಿಷೇಧ ಕಾಯ್ದೆಯು ದಲಿತರ ವಿರೋಧಿಯಾಗಿದೆ. ಈ ಕಾಯ್ದೆಗೆ ತಿದ್ದುಪಡಿ ತರುವಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದುದರಿಂದ ದಲಿತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಇಂತಹ ದಲಿತರ ಗಂಬೀರ ಸಮಸ್ಯೆಗಳ ಕುರಿತು ಚರ್ಚಿಸಬೇಕಾದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯ ಕುರಿತು ಚರ್ಚಿಸುತ್ತಿರುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು.
ಬೆಳಗಾವಿ ಅಧಿವೇಶನದಲ್ಲಿಯೇ ಭೂಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್)ಯ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ, ದಲಿತ ಒಕ್ಕೂಟಗಳ 5000 ಜನರೊಂದಿಗೆ ಡಿ.16ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಇದಕ್ಕೂ ಮನ್ನಣೆ ನೀಡದಿದ್ದರೆ, ದಲಿತರ ಹಕ್ಕೊತ್ತಾಯಕ್ಕಾಗಿ ರಾಜ್ಯದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟಗಳ ಪದಾಧಿಕಾರಿಗಳಾದ ಡಾ. ಆರ್. ಚಂದ್ರಶೇಖರ್, ಬನಶಂಕರಿನಾಗು, ಕಿರಣ್‍ಕುಮಾರ್ ಕೊತ್ತಗೆರೆ, ಬಸವರಾಜ ಇಂಡ್ಲವಾಡಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ದಲಿತರ ಭೂಮಿಯನ್ನು ಕಬಳಿಸಲು ಜನಪ್ರತಿನಿಧಿಗಳೊಂದಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕೈಜೋಡಿಸಿದ್ದಾರೆ. ಕೆಲವು ದಲಿತ ಮುಖಂಡರು ಅವರೊಂದಿಗೆ ಶಾಮೀಲಾಗಿ ಭೂಪರಭಾರೆ ಕಾಯ್ದೆಗೆ ತಿದ್ದುಪಡಿ ತರದಂತೆ ತಡೆಯುತ್ತಿದ್ದಾರೆ. ನ್ಯಾಯಲಯಗಳು ಭೂ ಕಬಳಿಕೆಯ ವಿಚಾರವಾಗಿ ದಲಿತರ ವಿರುದ್ಧವಾಗಿ ತೀರ್ಪು ನೀಡಿವೆ. ಆದುದರಿಂದ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ನೀಡಬೇಕು.
-ಸಿದ್ದರಾಜು, ಸಂಚಾಲಕರು, ಆದಿಜಾಂಭವ ಸಂಘ







