ಯಾವುದೇ ನದಿ ಸ್ವಚ್ಛವಾಗಿಲ್ಲ ಎಂಬ ಕಾರಣಕ್ಕೆ ಆದಿತ್ಯನಾಥ್ ಗಂಗೆಯಲ್ಲಿ ಸ್ನಾನ ಮಾಡಿಲ್ಲ: ಅಖಿಲೇಶ್ ಯಾದವ್

ಲಕ್ನೊ: "ಮುಖ್ಯಮಂತ್ರಿ ಆದಿತ್ಯನಾಥ್ ಅವರು ಯಾವುದೇ ನದಿಗಳು ಸ್ವಚ್ಛವಾಗಿಲ್ಲ ಎಂಬ ಅಂಶವನ್ನು ಚೆನ್ನಾಗಿ ತಿಳಿದಿದ್ದಾರೆ. ಆದ್ದರಿಂದ ಅವರು ಗಂಗಾ ನದಿಯಲ್ಲಿ ಸ್ನಾನ ಮಾಡದಿರಲು ನಿರ್ಧರಿಸಿದ್ದಾರೆ"ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಂದು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ವಾರಣಾಸಿಯಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ಮುಖ್ಯಮಂತ್ರಿ ಆದಿತ್ಯನಾಥ್ ಕಾರಿಡಾರ್ ಉದ್ಘಾಟನೆ ವೇಳೆ ಪ್ರಧಾನಿ ಅವರ ಜೊತೆಗಿದ್ದರೆ, ಸ್ನಾನದ ಸಮಯದಲ್ಲಿ ಪ್ರಧಾನಿ ಅವರೊಂದಿಗೆ ಹೋಗಲಿಲ್ಲ.
ಐದು ವರ್ಷಗಳ ಬಿಜೆಪಿ ಸರಕಾರವು ಪರಿಸ್ಥಿತಿಯನ್ನು ಸುಧಾರಿಸಿಲ್ಲ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ. 2014ರಲ್ಲಿ ಪ್ರಧಾನಿಯವರು ಅಧಿಕಾರಕ್ಕೆ ಬಂದ ಕೂಡಲೇ ಆರಂಭಿಸಿದ "ಸ್ವಚ್ಛತಾ ಅಭಿಯಾನ’ ಕೂಡ ನಗರವನ್ನು ಸ್ವಚ್ಛವಾಗಿಡುವಲ್ಲಿ ವಿಫಲವಾಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದರು.
ಸೋಮವಾರ ರೂ. 800 ಕೋಟಿಯ ಕಾಶಿ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ, ಆದಿತ್ಯನಾಥ್ ಅವರು ದಶಕಗಳಿಂದ ದೇಶದ ಆಧ್ಯಾತ್ಮಿಕ ರಾಜಧಾನಿಯ ಮೇಲೆ ಕಳಂಕವಾಗಿರುವ 'ಕೊಳಕು ಮತ್ತು ದಟ್ಟಣೆ' ಕುರಿತು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡಿದ್ದರು. ಆದಿತ್ಯನಾಥ್ ಆರೋಪಕ್ಕೆ ಅಖಿಲೇಶ್ ಇಂದು ಪ್ರತಿಕ್ರಿಯಿಸಿದ್ದಾರೆ.







