‘ಅಪಾಯಕಾರಿ’ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಮುಂಗಡ ಕಾಯ್ದಿರಿಸುವಿಕೆ ಕಡ್ಡಾಯ: ಕೇಂದ್ರ

ಹೊಸದಿಲ್ಲಿ, ಡಿ. 14: ಒಮೈಕ್ರಾನ್ನ ಆತಂಕದ ಹಿನ್ನೆಲೆಯಲ್ಲಿ ‘ಅಪಾಯಕಾರಿ’ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರು ಆರ್ಟಿ-ಪಿಸಿಆರ್ ಪರೀಕ್ಷೆ ಮುಂಗಡ ಕಾಯ್ದಿರಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಹೇಳಿದೆ. ಆದರೆ, ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮುಂಗಡ ಕಾಯ್ದಿರಿಸದ ಪ್ರಯಾಣಿಕರಿಗೆ ವಿಮಾನ ಏರಲು ಅವಕಾಶ ನೀಡಲಾಗಿದೆ. ಅಂತಹ ಪ್ರಯಾಣಿಕರ ಆರ್ಟಿ-ಪಿಸಿಆರ್ ಪರೀಕ್ಷೆಯ ಮುಂಗಡ ಕಾಯ್ದಿರಿಸುವುದು ಸಂಬಂಧಿತ ವಿಮಾನ ಯಾನ ಸಂಸ್ಥೆಗಳ ಜವಾಬ್ದಾರಿಯಾಗಿರಲಿದೆ. ಈ ನಿಯಮ ಭಾರತದಲ್ಲಿ ಡಿಸೆಂಬರ್ 20ರಿಂದ ಅಸ್ತಿತ್ವಕ್ಕೆ ಬರಲಿದೆ.
ಮೊದಲ ಹಂತದಲ್ಲಿ ಇದು ದಿಲ್ಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್- ಈ 6 ವಿಮಾನ ನಿಲ್ದಾಣಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗಲಿದೆ. ನಾಗರಿಕ ವಿಮಾನ ಯಾನ ಸಚಿವಾಲಯ ಜಾರಿಗೊಳಿಸಿದ ಜ್ಞಾಪನಾಪತ್ರದಲ್ಲಿ, ಕಳೆದ 14 ದಿನಗಳಲ್ಲಿ ‘ ಅಪಾಯಕಾರಿ’ ದೇಶಗಳಿಂದ ಆಗಮಿಸುವ ಅಥವಾ ‘ಅಪಾಯಕಾರಿ’ ದೇಶಗಳಿಗೆ ಭೇಟಿ ನೀಡಿ ಹಿಂದಿರುಗಿದ ಪ್ರಯಾಣಿಕರು ಆರ್ಟಿ-ಪಿಸಿಆರ್ ಪರೀಕ್ಷೆಗೆ ಮುಂಗಡ ಕಾಯ್ದಿರಿಸುವುದು ಕಡ್ಡಾಯ ಎಂದು ಏರ್ ಸುವಿಧಾ ಪೋರ್ಟಲ್ನಲ್ಲಿ ಮಾರ್ಗಸೂಚಿ ಪರಿವರ್ತಿಸಲಾಗುವುದು. ಇದು ಮೊದಲ ಹಂತದಲ್ಲಿ ದಿಲ್ಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ ಈ 6 ಮೆಟ್ರೋ ನಗರಗಳಲ್ಲಿ ಅನುಷ್ಠಾನಗೊಳ್ಳಬಹುದು ಎಂದು ಹೇಳಿದೆ.
ಆರೋಗ್ಯ ಸಚಿವಾಲಯದ ಪ್ರಕಾರ ಬ್ರಿಟನ್ ಸೇರಿದಂತೆ ಯುರೋಪ್ ರಾಷ್ಟ್ರಗಳು, ಅಲ್ಲದೆ, ದಕ್ಷಿಣ ಆಫ್ರಿಕಾ, ಬ್ರೆಝಿಲ್, ಬೋಟ್ಸ್ವಾನಾ, ಚೀನಾ, ಘಾನಾ, ಮಾರಿಷಸ್, ನ್ಯೂಝಿಲ್ಯಾಂಡ್, ಝಿಂಬಾಬ್ವೆ, ತಾಂಝಾನಿಯಾ, ಹಾಂಗ್ಕಾಂಗ್ ಹಾಗೂ ಇಸ್ರೇಲ್ ‘ಅಪಾಯಕಾರಿ’ ದೇಶಗಳ ಪಟ್ಟಿಯಲ್ಲಿ ಸೇರಿದೆ. ‘‘ವಿಮಾನ ಏರುವ ಮುನ್ನ ತಮ್ಮ ಪ್ರಯಾಣಿಕರು ಆರ್ಟಿ-ಪಿಸಿಆರ್ ಕಡ್ಡಾಯ ಮುಂಗಡ ಕಾಯ್ದಿರಿಸುವುದನ್ನು ಪರಿಶೀಲಿಸುವಂತೆ ಎಲ್ಲ ವಿಮಾನ ಯಾನ ಸಂಸ್ಥೆಗಳಿಗೆ ಸಲಹೆ ನೀಡುವಂತೆ ಡಿಜಿಸಿಎ ಮನವಿ ಮಾಡಲಾಗಿದೆ. ಒಂದು ವೇಳೆ ಯಾವುದೇ ಪ್ರಯಾಣಿಕರಿಗೆ ಮುಂಗಡ ಕಾಯ್ದಿರಿಸುವಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ಅವರಿಗೆ ವಿಮಾನ ಏರಲು ನಿರಾಕರಿಸದೇ ಇರಬಹುದು. ಆದರೆ, ಅಂತಹ ಪ್ರಯಾಣಿಕರನ್ನು ಗುರುತಿಸುವುದು ಹಾಗೂ ವಿಮಾನ ನಿಲ್ದಾಣದಲ್ಲಿ ಇರುವ ನೋಂದಣಿ ಕೌಂಟರ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಅವರನ್ನು ಕರೆದೊಯ್ಯುವುದು ವಿಮಾನ ಯಾನ ಸಂಸ್ಥೆಗಳ ಜವಾಬ್ದಾರಿಯಾಗಿದೆ’’ ಎಂದು ಜ್ಞಾಪನಾ ಪತ್ರ ಹೇಳಿದೆ.







