ಟಾಸ್ರಾಜ್ ದೇಗುಲ ಭೇಟಿಗಾಗಿ 112 ಭಾರತೀಯರಿಗೆ ಪಾಕ್ ವೀಸಾ

ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್,ಡಿ.14: ಪಾಕಿಸ್ತಾನದ ಪಂಜಾಬ್ ಪ್ರಾಂತದ ಚಕ್ವಾಲ್ ಜಿಲ್ಲೆಯಲ್ಲಿರುವ ಶ್ರೀ ಕಟಾಸ್ರಾಜ್ ದೇವಾಲಯಗಳಿಗೆ ಭೇಟಿ ನೀಡಲು 112 ಭಾರತೀಯ ಯಾತ್ರಿಕರಿಗೆ ಭಾರತದಲ್ಲಿನ ಪಾಕ್ ಹೈಮೀಶನ್ ವೀಸಾಗಳನ್ನು ನೀಡಿದೆ.
‘ಖಿಲಾ ಕಟಾಸ್’ ಅಥವಾ ‘ಕಟಾಸ್ ದೇಗುಲ ಸಂಕೀರ್ಣ’ವೆಂದೇ ಹೆಸರಾದ ಕಟಾಸ್ರಾಜ್ ದೇಗುಲಗಳಿಗೆ ಡಿಸೆಂಬರ್ 17ರಿಂದ 23ರವರೆಗೆ ಯಾತ್ರಿಕರ ತಂಡವು ಭೇಟಿ ನೀಡಲಿದೆ ಎಂದು ಭಾರತದಲ್ಲಿರುವ ಪಾಕ್ ಹೈಕಮೀಶನ್ ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಧಾರ್ಮಿಕ ಮಂದಿರಗಳಿಗೆ ಭೇಟಿ ಕುರಿತ 1974 ಶಿಷ್ಟಾಚಾರ ನಿಯಮಗಳಿಗೆ ಈ ಸಂದರ್ಶನವು ಒಳಪಟ್ಟಿದೆ. ಎರಡು ವಾರಗಳ ಹಿಂದೆ ಪಾಕಿಸ್ತಾನವು ಪಾಕಿಸ್ತಾನದಲ್ಲಿರುವ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು 136 ಭಾರತೀಯ ಯಾತ್ರಿಕರಿಗೆ ವೀಸಾಗಳನ್ನು ನೀಡಿತ್ತು. ಪಾಕಿಸ್ತಾನಕ್ಕೆ ಭೇಟಿ ನೀಡುವ ಹಿಂದೂ ಯಾತ್ರಿಕರಿಗೆ ಅಧ್ಯಾತ್ಮಿಕವಾಗಿ ಪ್ರಯೋಜನಕರವಾದಂತಹ ಯಾತ್ರೆಯನ್ನು ಒದಗಿಸಲು ಪಾಕ್ರಾಯಭಾರಿ ಕಚೇರಿ ಬಯಸುತ್ತಿದೆ’’ ಎಂದು ಹೈಕಮೀಶನ್ ಹೇಳಿಕೆ ತಿಳಿಸಿದೆ.
ಧಾರ್ಮಿಕ ಮಂದಿರಗಳಿಗೆ ಭೇಟಿ ಕುರಿತ ದ್ವಿಪಕ್ಷೀಯ ಶಿಷ್ಟಾಚಾರಗಳ ಕಾರ್ಯಚೌಕಟ್ಟಿನಡಿ ಪಾಕಿಸ್ತಾನವು ಪ್ರತಿ ವರ್ಷ ಸಿಖ್ ಹಾಗೂ ಹಿಂದೂ ಯಾತ್ರಿಕರಿಗೆ ಪಾಕ್ ಭೇಟಿಗೆ ಅನುಮತಿ ನೀಡುತ್ತಿದೆ. ಪಾಕಿಸ್ತಾನಕ್ಕೆ ಭೇಟಿ ನೀಡುವ ಎಲ್ಲಾ ಧರ್ಮಗಳ ಯಾತ್ರಿಕರಿಗೆ ಸಾಧ್ಯವಿರುವಂತಹ ಎಲ್ಲಾ ರೀತಿಯ ನೆರವನ್ನು ಒದಗಿಸಲು ಹಾಗೂ ಪವಿತ್ರ ಧಾರ್ಮಿಕ ಸ್ಥಳಗಳನ್ನು ಸಂರಕ್ಷಿಸಲು ಪಾಕಿಸ್ತಾನವು ಬದ್ಧವಾಗಿದೆ’’ ಎಂದು ಹೇಳಿಕೆಯು ತಿಳಿಸಿದೆ.





