ನ್ಯಾಯಮೂರ್ತಿ ಹುದ್ದೆಯಲ್ಲಿ ಶೇ.50 ಮಹಿಳಾ ಮೀಸಲಾತಿ: ಸಿಜೆಐ ಒಲವು

ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (source: PTI)
ಹೊಸದಿಲ್ಲಿ, ಡಿ.15: ಸಂವಿಧಾನಾತ್ಮಕ ಕೋರ್ಟ್ಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಪ್ರಾತಿನಿಧ್ಯ ನೀಡುವ ವಿಚಾರವನ್ನು ಹಾಲಿ ಇರುವ "ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ನ್ಯಾಯಮೂರ್ತಿಗಳು" ಕೊಲಾಜಿಯಂ ವ್ಯವಸ್ಥೆಯಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಸಹೋದ್ಯೋಗಿಗಳೊಂದಿಗೆ ಚರ್ಚಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಮಹಿಳಾ ವಕೀಲರಿಗೆ ಭರವಸೆ ನೀಡಿದ್ದಾರೆ. ಸುಪ್ರೀಂಕೋರ್ಟ್ನ 33 ನ್ಯಾಯಮೂರ್ತಿಗಳ ಪೈಕಿ ಮಹಿಳಾ ನ್ಯಾಯಮೂರ್ತಿಗಳ ಮಹಿಳಾ ಪ್ರಾತಿನಿಧ್ಯ ಇರುವುದು ಕೇವಲ ನಾಲ್ಕು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಮಹಿಳೆಯರ ಪ್ರಮಾಣ ಶೇಕಡ 11.5 ಮಾತ್ರ.
ಸಿಜೆಐ ಆಗಿ ಅಧಿಕಾರದಲ್ಲಿರುವುದು ಅನಿವಾರ್ಯವಾಗಿ ಒತ್ತಡಪೂರ್ವಕ. ಆದಾಗ್ಯೂ ಈ ವಿಚಾರವನ್ನು ಚರ್ಚಿಸುವುದಾಗಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದ್ದಾರೆ.
ಶೇಕಡ 50ರಷ್ಟು ಮಹಿಳಾ ಪ್ರಾತಿನಿಧ್ಯದ ಬಗೆಗಿನ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ, ಹೆಚ್ಚು ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಬೇಕಾದರೆ, ಕಾನೂನು ಪದವಿ ಪಡೆಯುವ ಹುಡುಗಿಯರ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.
"ಈ ಕಾರಣದಿಂದಲೇ ದೇಶಾದ್ಯಂತ ಕಾನೂನು ಕಾಲೇಜುಗಳ ಪ್ರವೇಶಕ್ಕೆ ಸಮಾನ ಮಹಿಳಾ ಮೀಸಲಾತಿ ನೀತಿಯನ್ನು ರೂಪಿಸುವಂತೆ ಕಳೆದ ಬಾರಿ ಶಿಫಾರಸು ಮಾಡಿದ್ದೆ" ಎಂದು ವಿವರಿಸಿದರು.
"ಕೆಳಹಂತದ ನ್ಯಾಯಾಲಯಗಳಲ್ಲಿ ಸರಾಸರಿ ಶೇಕಡ 30ರಷ್ಟು ಮಾತ್ರ ಮಹಿಳೆಯರಿದ್ದಾರೆ. ಮಹಿಳಾ ವಕೀಲರ ಸಂಕ್ಯೆ ಕೂಡಾ ಉತ್ತಮವಾಗಿಲ್ಲ. 17 ಲಕ್ಷ ನೋಂದಾಯಿತ ವಕೀಲರ ಪೈಕಿ ಶೇಕಡ 15ರಷ್ಟು ಮಾತ್ರ ಮಹಿಳೆಯರಿದ್ದಾರೆ" ಎಂದು ಹೇಳಿದರು.