ಬೆಳಗ್ಗೆ ಬಿಜೆಪಿ ಸೇರ್ಪಡೆಯಾಗಿ ಸಂಜೆ ಅಮರಿಂದರ್ ಸಿಂಗ್ ಜೊತೆ ಕಾಣಿಸಿಕೊಂಡ ಪಂಜಾಬ್ ಗಾಯಕ ಬೂಟಾ ಮುಹಮ್ಮದ್

Photo: facebook.com/Capt.Amarinder
ಚಂಡಿಗಡ: ಪಂಜಾಬಿ ಜಾನಪದ ಗಾಯಕ ಬೂಟಾ ಮುಹಮ್ಮದ್ ಅವರು ಮಂಗಳವಾರ ಬೆಳಗ್ಗೆ, ಲೂಧಿಯಾನದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಪಕ್ಷದ ಇತರ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.
ಆದಾಗ್ಯೂ, ಕೆಲವು ಗಂಟೆಗಳ ನಂತರ, ಬೂಟಾ ಮುಹಮ್ಮದ್ ಚಂಡೀಗಢದಲ್ಲಿ ಮಾಜಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡರು. ಇದು ಹೆಚ್ಚು ಗೊಂದಲಕ್ಕೆ ಕಾರಣವಾಯಿತು. ಇತ್ತೀಚೆಗೆ ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮಂಗಳವಾರ ಹಲವಾರು ಹೊಸ ಸದಸ್ಯರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು.
ಬೂಟಾ ಮುಹಮ್ಮದ್ ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಂದ ಸಿರೋಪಾ (ಪಾರ್ಟಿ ಮಫ್ಲರ್) ಸ್ವೀಕರಿಸುತ್ತಿರುವುದು ಕಂಡುಬಂದಿದೆ. ಪಂಜಾಬ್ ಲೋಕ ಕಾಂಗ್ರೆಸ್ ಕೂಡ ಅಮರಿಂದರ್ ಸಿಂಗ್ ಜೊತೆಗಿನ ಮುಹಮ್ಮದ್ ಚಿತ್ರಗಳನ್ನು ಹಂಚಿಕೊಂಡಿದೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಕಾರ್ಯಕ್ರಮಕ್ಕೆ ಗಾಯಕ ಸರ್ದಾರ್ ಅಲಿ ಅವರ ಜೊತೆ ನಾನು ಹೋಗಿದ್ದೆ. ಆದರೆ ಪಂಜಾಬ್ ಲೋಕ ಕಾಂಗ್ರೆಸ್ ಸೇರಿಲ್ಲ ಎಂದು ಗಾಯಕ ನಂತರ ಸ್ಪಷ್ಟಪಡಿಸಿದ್ದಾರೆ.
ಬೂಟಾ ಮುಹಮ್ಮದ್ ಪಂಜಾಬ್ ನ ಸೂಫಿ ಗಾಯಕರ ಕುಟುಂಬಕ್ಕೆ ಸೇರಿದವರು. ಅವರ ತಂದೆ ದಿವಂಗತ ಸರ್ದಾರ್ ಮುಹಮ್ಮದ್ ಅವರು ಪ್ರಸಿದ್ಧ ಗಾಯಕ ಮತ್ತು ಸಂಗೀತಗಾರರಾಗಿದ್ದರು. ಬೂಟಾ ಮುಹಮ್ಮದ್ ತನ್ನ ತಂದೆ ಮತ್ತು ಚಿಕ್ಕಪ್ಪನಿಂದ ಸಂಗೀತವನ್ನು ಕಲಿತರು. ಅವರ ಸಹೋದರ ಕೂಡ ಗಾಯಕ.