ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆ: ಕೇಂದ್ರ ಸಚಿವರನ್ನು ಉಚ್ಚಾಟಿಸಲು ರಾಹುಲ್ ಗಾಂಧಿ ಒತ್ತಾಯ

ಹೊಸದಿಲ್ಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯನ್ನು ಯೋಜಿತ ಪಿತೂರಿ ಎಂದು ತನಿಖಾ ವರದಿ ವಿವರಿಸಿದ ನಂತರ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಎಂದು ಸಂಸತ್ತಿನಲ್ಲಿ ಇಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಎಂಟು ಮಂದಿ ಸಾವಿಗೀಡಾದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವರದಿಯನ್ನು ಚರ್ಚಿಸಲು ಸದನದ ಕಲಾಪವನ್ನು ಮುಂದೂಡುವಂತೆ ಕೋರಿ ರಾಹುಲ್ ಗಾಂಧಿ ನೋಟಿಸ್ ನೀಡಿದ್ದಾರೆ ಹಾಗೂ ಲಖಿಂಪುರ ಖೇರಿ ಘಟನೆಯ ಕುರಿತು ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯ ನಂತರ ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಗೆ ನೀಡಿದ ನೋಟಿಸ್‌ನಲ್ಲಿ ಹೇಳಿದ್ದಾರೆ.
"ಲಖೀಂಪುರದಲ್ಲಿ ನಡೆದ ರೈತರ ಹತ್ಯಾಕಾಂಡ ಪೂರ್ವ ಯೋಜಿತ ಪಿತೂರಿಯಾಗಿದೆ ಹಾಗೂ ನಿರ್ಲಕ್ಷ್ಯದ ಕೃತ್ಯವಲ್ಲ ಎಂದು ಉತ್ತರಪ್ರದೇಶ ಪೊಲೀಸ್ ಎಸ್‌ಐಟಿ ವರದಿ ಎತ್ತಿ ತೋರಿಸಿದೆ" ಎಂದು ಕಾಂಗ್ರೆಸ್ ಸಂಸದರು ಇಂದು ಬೆಳಿಗ್ಗೆ ತಮ್ಮ ನೋಟಿಸ್‌ನಲ್ಲಿ ಬರೆದಿದ್ದಾರೆ.
"ಸರಕಾರವು ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯವನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.
ನಿನ್ನೆಯ ವಿವರವಾದ ಸಿಟ್ ವರದಿಯು ಲಖೀಂಪುರ ಖೇರಿಯಲ್ಲಿ ಆಶಿಶ್ ಮಿಶ್ರಾ ಚಲಾಯಿಸುತ್ತಿದ್ದ ಕಾರನ್ನು "ಕೊಲೆ ಮಾಡುವ ಉದ್ದೇಶದಿಂದ" ರೈತರ ಮೇಲೆ ಓಡಿಸಲಾಯಿತು ಮತ್ತು ಇದು "ನಿರ್ಲಕ್ಷ್ಯದಿಂದ ಸಾವಲ್ಲ" ಎಂದು ಹೇಳಿತ್ತು.