ಜನರಲ್ ಬಿಪಿನ್ ರಾವತ್‌ರ ಉತ್ತರಾಧಿಕಾರಿ ಯಾರು?

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕಳೆದ ವಾರ ಸಂಭವಿಸಿದ ಹೆಲಿಕಾಪ್ಟರ್ ಅಫಘಾತದಲ್ಲಿ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮೃತಪಟ್ಟ ಬಳಿಕ, ಅವರ ಸ್ಥಾನವನ್ನು ಇನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆ ಎದ್ದಿದೆ.
ಅದೇ ದಿನ (ಡಿಸೆಂಬರ್ 8) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿರುವ ಭದ್ರತೆ ಕುರಿತ ಸಚಿವ ಸಂಪುಟ ಸಮಿತಿಯು ಸಭೆ ಸೇರಿತಾದರೂ, ನೂತನ ಸೇನಾ ಮುಖ್ಯಸ್ಥರ ಹೆಸರನ್ನು ಸರಕಾರ ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಈ ಹುದ್ದೆಗೆ ಹಲವು ಹೆಸರುಗಳು ಕೇಳಿಬರುತ್ತಿವೆ. ಕೆಲವು ವರದಿಗಳ ಪ್ರಕಾರ, ಜನರಲ್ ರಾವತ್‌ರ ಉತ್ತರಾಧಿಕಾರಿಯನ್ನು ಸರಕಾರ ಈ ವಾರ ಪ್ರಕಟಿಸಬಹುದು.
ಸಿಡಿಎಸ್ ಹುದ್ದೆಗೆ ಯಾರು ಅರ್ಹರು?
ಭಾರತೀಯ ಭೂಸೇನೆ, ವಾಯು ಪಡೆ ಮತ್ತು ನೌಕಾಪಡೆ- ಈ ಮೂರು ವಿಭಾಗಗಳ ಯಾವುದೇ ಕಮಾಂಡಿಂಗ್ ಆಫೀಸರ್ ಸಿಡಿಎಸ್ ಹುದ್ದೆಗೆ ಅರ್ಹರು. ಅದರ ಜೊತೆಗೆ ಸರಕಾರವು ಅಧಿಕಾರಿಯ ಅರ್ಹತೆ ಮತ್ತು ಜ್ಯೇಷ್ಠತೆಯನ್ನು ಪರಿಗಣಿಸುತ್ತದೆ. ಅದೇ ವೇಳೆ, ಈ ಹುದ್ದೆಯನ್ನು ವಹಿಸಿಕೊಳ್ಳುವ ವ್ಯಕ್ತಿಯ ಪ್ರಾಯ 65 ವರ್ಷಕ್ಕಿಂತ ಹೆಚ್ಚಾಗಬಾರದು.
ಈ ಹುದ್ದೆಗೆ ಹಲವು ಹೆಸರುಗಳು ಚಾಲನೆಯಲ್ಲಿದ್ದು, ಮುಂಚೂಣಿಯಲ್ಲಿರುವ ಕೆಲವು ಹೆಸರುಗಳನ್ನು ಇಲ್ಲಿ ನೀಡಲಾಗಿದೆ.
1.ಜನರಲ್ ಮನೋಜ್ ಮುಕುಂದ್ ನರವಾನೆ

ಜನರಲ್ ರಾವತ್‌ರ ಉತ್ತರಾಧಿಕಾರಿಯಾಗಿ ಮೊದಲು ಕೇಳಿಬರುವ ಹೆಸರು ಜನರಲ್ ಎಂ. ಎಂ. ನರವಾನೆ. ನರವಾನೆ ಸೇನೆಯಲ್ಲಿರುವ ಅತಿ ಹಿರಿಯ ವ್ಯಕ್ತಿ. ಅವರು 2019 ಡಿಸೆಂಬರ್ 31ರಂದು ಭಾರತೀಯ ಭೂಸೇನೆಯ 27ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮೊದಲು ಅವರು ಸೇನೆಯ 40ನೇ ಉಪಮುಖ್ಯಸ್ಥ, ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಮತ್ತು ಸೇನಾ ತರಬೇತಿ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸಿದ್ದರು. ಅವರು 2022 ಎಪ್ರಿಲ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಆದರೂ, ಅವರು 65ನೇ ವರ್ಷದವರೆಗೆ ಮೂರೂ ಸೇನಾ ಪಡೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಬಹುದಾಗಿದೆ.
2. ಏರ್ ಚೀಫ್ ಮಾರ್ಶಲ್ ಆರ್.ಕೆ.ಎಸ್. ಭದೌರಿಯ

ಏರ್ ಚೀಫ್ ಮಾರ್ಶಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯ ನಿವೃತ್ತ ಭಾರತೀಯ ವಾಯುಪಡೆ ಅಧಿಕಾರಿ. ಏರ್ ಚೀಫ್ ಮಾರ್ಶಲ್ ಬೀರೇಂದರ್ ಸಿಂಗ್ ದನೋವ ನಿವೃತ್ತಿಯ ಬಳಿಕ, 2019 ಸೆಪ್ಟಂಬರ್ 30ರಿಂದ ಅವರು ಭಾರತೀಯ ವಾಯು ಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರು 2021 ಸೆಪ್ಟಂಬರ್ 30ರಂದು ನಿವೃತ್ತಿ ಹೊಂದಿದರು. ಅವರ ಸ್ಥಾನವನ್ನು ಈಗ ಏರ್ ಚೀಫ್ ಮಾರ್ಶಲ್ ವಿವೇಕ್ ರಾಮ್ ಚೌಧರಿ ವಹಿಸಿಕೊಂಡಿದ್ದಾರೆ. ಭದೌರಿ 1980ರ ಜೂನ್‌ನಲ್ಲಿ ಭಾರತೀಯ ವಾಯುಪಡೆಯನ್ನು ಸೇರಿದರು ಹಾಗೂ 42 ವರ್ಷಗಳ ಕಾಲ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿದರು. ಅವರು 27 ಮಾದರಿಗಳ ಯುದ್ಧ ವಿಮಾನಗಳು ಮತ್ತು ಸಾರಿಗೆ ವಿಮಾನಗಳನ್ನು 4,270ಕ್ಕೂ ಹೆಚ್ಚು ಗಂಟೆ ಚಲಾಯಿಸಿದ ಅನುಭವವನ್ನು ಹೊಂದಿದ್ದಾರೆ. ಪ್ರಾಯೋಗಿಕ ಪರೀಕ್ಷಾ ಪೈಲಟ್, ‘ಕ್ಯಾಟ್ ಎ’ ಅರ್ಹತೆ ಹೊಂದಿದ ಹಾರಾಟ ಬೋಧಕ ಹಾಗೂ ಪೈಲಟ್ ದಾಳಿ ಬೋಧಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
3. ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ವಿ.ಆರ್. ಚೌಧರಿ

ಏರ್ ಚೀಫ್ ಮಾರ್ಶಲ್ ವಿ. ಆರ್. ಚೌಧರಿ ವಾಯುಪಡೆಯ 27ನೇ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಿವೃತ್ತ ಏರ್ ಚೀಫ್ ಮಾರ್ಶಲ್ ಆರ್.ಕೆ.ಎಸ್. ಭದೌರಿಯ ಅವರ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ವಾಯುಪಡೆಯ 45ನೇ ಉಪಮುಖ್ಯಸ್ಥರಾಗಿ ಮತ್ತು ವೆಸ್ಟರ್ನ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸಿದ್ದರು. ಚೌಧರಿ 1982 ಡಿಸೆಂಬರ್ 29ರಂದು ಯುದ್ಧವಿಮಾನ ಪೈಲಟ್ ಆಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡರು. ಅವರು ವಿವಿಧ ಯುದ್ಧ ವಿಮಾನಗಳನ್ನು 3,800ಕ್ಕೂ ಅಧಿಕ ಗಂಟೆಗಳ ಕಾಲ ಹಾರಿಸಿದ ಅನುಭವ ಹೊಂದಿದ್ದಾರೆ. ಚೌಧರಿ ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ಏರ್ ಸ್ಟಾಫ್ ಆಪರೇಶನ್ಸ್ (ಏರ್ ಡಿಫೆನ್ಸ್) ನ ಸಹಾಯಕ ಮುಖ್ಯಸ್ಥರಾಗಿ ಹಾಗೂ ದಿಂಡಿಗಲ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ಉಪ ಕಮಾಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
4. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್

ಅಡ್ಮಿರಲ್ ರಾಧಾಕೃಷ್ಣನ್ ಹರಿ ಕುಮಾರ್ ನೌಕಾಪಡೆಯ 25ನೇ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಅಡ್ಮಿರಲ್ ಕರಂಬೀರ್ ಸಿಂಗ್‌ರ ನಿವೃತ್ತಿ ಬಳಿಕ 2021 ನವೆಂಬರ್ 30ರಂದು ಈ ಹುದ್ದೆಯನ್ನು ವಹಿಸಿಕೊಂಡರು. ಅದಕ್ಕೂ ಮೊದಲು ಅವರು ವೆಸ್ಟರ್ನ್ ನ್ಯಾವಲ್ ಕಮಾಂಡ್‌ನಲ್ಲಿ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸಿದ್ದರು. ಕುಮಾರ್ 1983 ಜನವರಿ 1ರಂದು ನೌಕಾ ಪಡೆಗೆ ಸೇರ್ಪಡೆಗೊಂಡರು. ಅವರು ಡಿಫೆನ್ಸ್ ಸ್ಟಾಫ್‌ನ ಉಪ ಮುಖ್ಯಸ್ಥರಾಗಿ, ಸಿಬ್ಬಂದಿ ವಿಭಾಗದ ಮುಖ್ಯಸ್ಥರಾಗಿ, ವೆಸ್ಟರ್ನ್ ಫ್ಲೀಟ್‌ನ ಫ್ಲ್ಯಾಗ್ ಆಫೀಸರ್ ಆಗಿ ಮತ್ತು ವೆಸ್ಟರ್ನ್ ನ್ಯಾವಲ್ ಕಮಾಂಡ್‌ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.







