"ಕ್ರೀಡೆಗಿಂತ ಯಾರೂ ದೊಡ್ಡವರಲ್ಲ": ಕೊಹ್ಲಿ, ರೋಹಿತ್ ಭಿನ್ನಾಭಿಪ್ರಾಯದ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್

ಹೊಸದಿಲ್ಲಿ:ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಟ್ವೀಟ್ ಮಾಡಿದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ''ಯಾವ ಆಟಗಾರನೂ ಕ್ರೀಡೆಕ್ಕಿಂತ ದೊಡ್ಡವನಲ್ಲ'' ಎಂದು ಹೇಳಿದ್ದಾರೆ.
"ಕ್ರೀಡೆಯು ಶ್ರೇಷ್ಠವಾಗಿದೆ ಹಾಗೂ ಕ್ರೀಡೆಗಿಂತ ಯಾರೂ ದೊಡ್ಡವರಲ್ಲ. ಯಾವ ಆಟಗಾರರ ನಡುವೆ ಯಾವ ಆಟದಲ್ಲಿ ಏನು ನಡೆಯುತ್ತಿದೆ ಎಂದು ನಾನು ನಿಮಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಇದು ಸಂಬಂಧಪಟ್ಟ ಒಕ್ಕೂಟಗಳು/ಸಂಘಗಳ ಕೆಲಸ. ಅವರು ಮಾಹಿತಿ ನೀಡಿದರೆ ಅದು ಉತ್ತಮವಾಗಿರುತ್ತದೆ" ಎಂದು ಕೊಹ್ಲಿ ಮತ್ತುರೋಹಿತ್ ಶರ್ಮಾ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದಾಗ ಅನುರಾಗ್ ಠಾಕೂರ್ ಹೇಳಿದರು.
ವಿರಾಟ್ ಕೊಹ್ಲಿ ಅವರು ಏಕದಿನ ಸರಣಿಗೆ ತಾನು ಲಭ್ಯವಿಲ್ಲ ಹಾಗೂ ರೋಹಿತ್ ಶರ್ಮಾ ಮುಂಬರುವ ಟೆಸ್ಟ್‌ಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ. ವಿರಾಮ ತೆಗೆದು ಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಸಮಯ ಉತ್ತಮವಾಗಿರಬೇಕು. ಇದು ಆಟಗಾರರ ಭಿನ್ನಾಭಿಪ್ರಾಯದ ಕುರಿತ ಊಹಾಪೋಹಗಳನ್ನು ಸಮರ್ಥಿಸುತ್ತದೆ ಎಂದು ಅಝರುದ್ದೀನ್ ಟ್ವೀಟ್ ಮಾಡಿದ್ದರು.
ರೋಹಿತ್ ಹಾಗೂ ಕೊಹ್ಲಿ ಒಟ್ಟಿಗೆ ಆಡದಿದ್ದರೆ, ಟೀಮ್ ಇಂಡಿಯಾ ಬಳಲುತ್ತದೆ ಹಾಗೂ ಕ್ರಿಕೆಟ್‌ಗೆ ಹೊಡೆತ ಬೀಳುತ್ತದೆ ಎಂದು ಮಂಗಳವಾರ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಹೇಳಿದರು.