ಹೆಲಿಕಾಪ್ಟರ್ ಪತನ: ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆಸ್ಪತ್ರೆಯಲ್ಲಿ ನಿಧನ

ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್(Photo: Twitter/@ANI)
ಹೊಸದಿಲ್ಲಿ,ಡಿ.15: ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ್ದ ಭಾರತೀಯ ವಾಯುಪಡೆ ಹೆಲಿಕಾಪ್ಟರ ಪತನದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ ಸಿಂಗ್ ಅವರು ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಜೀವರಕ್ಷಕ ಸಾಧನವನ್ನು ಅಳವಡಿಸಲಾಗಿತ್ತು. ಡಿ.8ರಂದು ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್,ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಜನರು ಮೃತಪಟ್ಟಿದ್ದು,ಸಿಂಗ್ ಬದುಕುಳಿದಿದ್ದ ಏಕೈಕ ವ್ಯಕ್ತಿಯಾಗಿದ್ದರು.
ಸಿಂಗ್ ಅವರ ನಿಧನವನ್ನು ಭಾರತೀಯ ವಾಯುಪಡೆಯು ದೃಢಪಡಿಸಿದೆ. ಸಿಂಗ್ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿ ಟ್ವೀಟಿಸಿರುವ ಅದು,ದುಃಖತಪ್ತ ಕುಟುಂಬಕ್ಕೆ ತಾನು ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದೆ.
ತೀವ್ರ ಸುಟ್ಟಗಾಯಗಳಾಗಿದ್ದ ಸಿಂಗ್ ಅವರನ್ನು ಕೂನೂರು ಬಳಿಯ ವೆಲಿಂಗ್ಟನ್ನ ಸೇನಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಸಿಂಗ್ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು,‘ಗ್ರೂಪ್ ಕ್ಯಾಪ್ಟನ್ ವರುಣ ಸಿಂಗ್ ಅವರು ಹೆಮ್ಮೆ,ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯೊಂದಿಗೆ ದೇಶಕ್ಕೆ ಸೇವೆಯನ್ನು ಸಲ್ಲಿಸಿದ್ದರು. ಅವರ ನಿಧನ ನನಗೆ ಅತೀವ ನೋವನ್ನುಂಟು ಮಾಡಿದೆ. ದೇಶಕ್ಕೆ ಅವರ ಉತ್ಕೃಷ್ಟ ಸೇವೆಯನ್ನು ಎಂದಿಗೂ ಮರೆಯಲಾಗದು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು ’ಎಂದು ಟ್ವೀಟಿಸಿದ್ದಾರೆ.
ಸಿಂಗ್ ನಿಧನದಿಂದ ತನಗುಂಟಾಗಿರುವ ನೋವು ಶಬ್ದಗಳನ್ನು ಮೀರಿದೆ ಎಂದು ಹೇಳಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸಿಂಗ್ ನಿಜವಾದ ಹೋರಾಟಗಾರನಾಗಿದ್ದು, ತನ್ನ ಕೊನೆಯುಸಿರಿನವರೆಗೂ ಹೋರಾಡಿದ್ದರು ಎಂದು ಬಣ್ಣಿಸಿದ್ದಾರೆ.
ಗೃಹಸಚಿವ ಅಮಿತ್ ಶಾ ಅವರೂ ದುಃಖವನ್ನು ವ್ಯಕ್ತಪಡಿಸಿದ್ದು, ದೇವರು ಸಿಂಗ್ ಆತ್ಮಕ್ಕೆ ಶಾಂತಿಯನ್ನು ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಹಾರೈಸಿದ್ದಾರೆ
Group Captain Varun Singh served the nation with pride, valour and utmost professionalism. I am extremely anguished by his passing away. His rich service to the nation will never be forgotten. Condolences to his family and friends. Om Shanti.
— Narendra Modi (@narendramodi) December 15, 2021