ಮಾಜಿ ಸಿಜೆಐ ರಂಜನ್ ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಂಖ್ಯೆ 10ಕ್ಕೆ ಏರಿಕೆ

ಹೊಸದಿಲ್ಲಿ: ಡಿಸೆಂಬರ್ 9ರಂದು ಸುದ್ದಿ ವಾಹಿನಿ ಎನ್‍ಡಿಟಿವಿ ಜತೆಗಿನ ಸಂದರ್ಶನದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ನೀಡಿದ್ದ ಹೇಳಿಕೆಗೆ ಅವರ ವಿರುದ್ಧ ಸಂಸದರು ಸಲ್ಲಿಸಿರುವ ಹಕ್ಕುಚ್ಯುತಿ ನೋಟಿಸ್‍ಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಆರಂಭದಲ್ಲಿ ಟಿಎಂಸಿ ರಾಜ್ಯಸಭಾ ಸದಸ್ಯರಾದ ಜವಾಹರ್ ಸಿರ್ಕಾರ್ ಮತ್ತು ಮೌಸಮ್ ನೂರ್ ಅವರು ಹಕ್ಕುಚ್ಯುತಿ ನೋಡಿಸ್ ನೀಡಿದ್ದರೆ ನಂತರ ಕಾಂಗ್ರೆಸ್, ಸಿಪಿಎಂ, ಸಮಾಜವಾದಿ ಪಕ್ಷ, ಶಿವಸೇನೆ ಮತ್ತು ಸಮಾಜವಾದಿ ಪಕ್ಷ ಮತ್ತು ಐಯುಎಂಎಲ್ ಕೂಡ ಹಕ್ಕುಚ್ಯುತಿ ನೋಟಿಸ್ ನೀಡಿವೆ.
``ನನಗೆ ಮನಸ್ಸಾದಾಗ ನಾನು ರಾಜ್ಯಸಭೆಗೆ ಹೋಗುತ್ತೇನೆ. ಕೋವಿಡ್ (ವೈದ್ಯಕೀಯ ಸಲಹೆಯಂತೆ) ಕಾರಣ ನಾನು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲವೆಂದು ಪತ್ರ ಬರೆದಿದ್ದೆ. ಕಳೆದ ಚಳಿಗಾಲದ ಅಧಿವೇಶನಕ್ಕಿಂತ ಸ್ವಲ್ಪ ಮೊದಲು ಆರ್‍ಟಿ-ಪಿಸಿಆರ್ ಪರೀಕ್ಷೆ ನಡೆಸಿದರೆ ಮಾತ್ರ ರಾಜ್ಯಸಭೆಗೆ ಪ್ರವೇಶಿಸಬಹುದಾಗಿತ್ತು. ಆದರೆ ಅಲ್ಲಿಗೆ ನನಗೆ ಹೋಗುವುದು ಅಷ್ಟೊಂದು ಸಮಾಧಾನ ತಂದಿಲ್ಲ, ಸಾಮಾಜಿಕ ಅಂತರ ನಿಯಮವಿದ್ದರೂ ಪಾಲನೆಯಾಗುತ್ತಿರಲಿಲ್ಲ. ಆಸನ ಏರ್ಪಾಟು ಕೂಡ ಸಮಾಧಾನ ತಂದಿಲ್ಲ. ನಾನು ನನಗೆ ಬೇಕಿದ್ದಾಗ ರಾಜ್ಯಸಭೆಗೆ ಹೋಗುತ್ತೇನೆ. ನಾನು ಮಾತನಾಡಬೇಕಾದಂತಹ ಪ್ರಮುಖ ವಿಚಾರಗಳಿವೆ ಎನ್ನುವಾಗ. ನಾನು ನಾಮನಿರ್ದೇಶಿತ ಸದಸ್ಯ, ಯಾವುದೇ ಪಕ್ಷದ ವಿಪ್ ನನಗೆ ಅನ್ವಯಿಸುವುದಿಲ್ಲ. ಆದುದರಿಂದ ಸದಸ್ಯರಿಗೆ ಒಳಬರಲು ಗಂಟೆ ಬಾರಿಸಿದಾಗ ಅದು ನನಗೆ ಅನ್ವಯವಾಗುವುದಿಲ್ಲ ನನಗಿಷ್ಟ ಬಂದಾಗ ಹೋಗುತ್ತೇನೆ ಹಾಗೂ ಹೊರಬರುತ್ತೇನೆ. ನಾನು ಸದನದ ಸ್ವತಂತ್ರ ಸದಸ್ಯ,'' ಎಂದು ಗೊಗೊಯಿ ಸಂದರ್ಶನದಲ್ಲಿ ಹೇಳಿದ್ದರು.''