ಪಾಂಬೂರು ಮಾನಸ ಕೇಂದ್ರದ ರಜತ ಮಹೋತ್ಸವ ವರ್ಷಾಚರಣೆಗೆ ಚಾಲನೆ

ಉಡುಪಿ, ಡಿ.15: ವಿಶೇಷ ಮಕ್ಕಳ ಸೇವೆ ದೇವರ ಸೇವೆಯಿದ್ದಂತೆ ಅವರ ಪ್ರತಿಭೆಗೆ ಸ್ಥಾನಮಾನ, ಗೌರವ ನೀಡುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಅವರೂ ಕೂಡ ತೊಡಗಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ ವಂ.ಜೆ.ಬಿ. ಸಲ್ಡಾನಾ ಹೇಳಿದ್ದಾರೆ.
ಅವರು ಬುಧವಾರ ಪಾಂಬೂರು ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರದ ರಜತ ಮಹೋತ್ಸವ ವರ್ಷದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ರಜತ ಮಹೋತ್ಸವ ಸಮಿತಿಯ ಸಂಚಾಲಕ ಎಲ್ರೋಯ್ ಕಿರಣ್ ಕ್ರಾಸ್ಟೊ ಮಾತನಾಡಿ, ಮಾನಸ ಸಂಸ್ಥೆಯ ರಜತ ಮಹೋತ್ಸವ ವರ್ಷಕ್ಕೆ ಸಂಸ್ಥೆಯ ಹಾಗೂ ವಿಶೇಷ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಆವರಣದಲ್ಲಿ ಸೋಲಾರ್ ದೀಪಗಳ ಅಳವಡಿಕೆ, ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯನಿಧಿ ರಚನೆ, ರಜತ ಮಹೋತ್ಸವದ ಸ್ಮರಣ ಸಂಚಿಕೆ, ಆಟಿಸಂ ಸೇಂಟರ್, ವಿಶೇಷ ಮಕ್ಕಳ ಆರೈಕೆ ಧಾಮ, ಕೌಶಲ್ಯಾಭಿವೃದ್ಧಿ ಕೇಂದ್ರ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹಲವು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ರಜತ ಮಹೋತ್ಸವದ ಲೋಗೊವನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಅನಾವರಣಗೊಳಿಸಿ ದರು. ತನಗೆ ಸಾಹಿತ್ಯ ಪುರಸ್ಕಾರದಿಂದ ಲಭಿಸಿದ ಹಣದಿಂದ ಮಾನಸ ಸಂಸ್ಥೆಗೆ ಆಳವಡಿಸಲಾದ ಸೋಲಾರ್ ದೀಪಗಳ ಉದ್ಘಾಟನೆಯನ್ನು ಸಾಹಿತಿ ವಿತಾಶಾ ರಿಯಾ ರೊಡ್ರಿಗಸ್ ನೆರವೇರಿಸಿದರು.
ಕೆಥೊಲಿಕ್ ಸಭಾ ಮಂಗಳೂರು ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶದ ಅಧ್ಯಕ್ಷ ಮೇರಿ ಡಿಸೋಜ, ಮಾನಸ ಸಂಸ್ಥೆಯ ಕಾರ್ಯದರ್ಶಿ ಜೊಸೇಫ್ ನೊರೋನ್ಹಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀನಿಧಿ ಶೆಟ್ಟಿಗಾರ್, ಟ್ರಸ್ಟಿಗಳಾದ ವಲೇರಿಯನ್ ಫೆರ್ನಾಂಡಿಸ್, ಲೀನಾ ಮಚಾದೊ, ಕೆಥೊಲಿಕ್ ಸಭಾ ಪದಾಧಿಕಾರಿಗಳಾದ ಆಲ್ವಿನ್ ಕ್ವಾಡ್ರಸ್, ರೋಬರ್ಟ್ ಮಿನೇಜಸ್, ಗ್ರೆಗರಿ ಪಿಕೆ ಡಿಸೋಜ, ಜೆರಾಲ್ಡ್ ರೊಡ್ರಿಗಸ್, ಮೆಲ್ವಿನ್ ಆರಾನ್ಹಾ ಉಪಸ್ಥಿತರಿದ್ದರು.
ಮಾನಸ ಸಂಸ್ಥೆಯ ಸಹಕಾರ್ಯದರ್ಶಿ ಡಾ. ಜೆರಾಲ್ಡ್ ಪಿಂಟೊ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಪ್ರಾಂಶುಪಾಲೆ ಸಿ.ಅನ್ಸಿಲ್ಲಾ ಫೆರ್ನಾಂಡಿಸ್ ವಂದಿಸಿದರು.







