ಉಪ್ಪಿನಂಗಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್: ಪಿಎಫ್ಐ ಆರೋಪ
'ಲಾಠಿಚಾರ್ಜ್ ಖಂಡಿಸಿ ಡಿ.17ರಂದು ಎಸ್ಪಿ ಕಚೇರಿ ಎದುರು ಪ್ರತಿಭಟನೆ'

ಮಂಗಳೂರು, ಡಿ.15: ಅಕ್ರಮವಾಗಿ ಬಂಧಿಸಿದ ಪಾಪ್ಯುಲರ್ ಫಂಟ್ ಆಫ್ ಇಂಡಿಯಾದ ನಾಯಕರ ಬಿಡುಗಡೆಗೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ಮೇಲೆ ಉಪ್ಪಿನಂಗಡಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದು ಖಂಡನೀಯ. ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪಿಎಫ್ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಪೊಲೀಸ್ ಲಾಠಿಚಾರ್ಜ್ ಅನ್ನು ಖಂಡಿಸಿ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿ.17ರಂದು ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾತೋರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂವರು ಪಿಎಫ್ಐ ನಾಯಕರನ್ನು ಅಕ್ರಮವಾಗಿ ಬಂಧಿಸಿದ್ದರು, ಆದರೆ ಬಂಧನದ ವೇಳೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ ಮತ್ತು ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿರಲಿಲ್ಲ. ಈ ಅಕ್ರಮ ಬಂಧನವನ್ನು ಖಂಡಿಸಿ ಪ್ರತಿಭಟನಕಾರರು ಸೋಮವಾರ ಬೆಳಗ್ಗೆ ಉಪ್ಪಿನಂಗಡಿ ಠಾಣೆಯ ಮುಂದೆ ಜಮಾಯಿಸಿದ್ದರು. ಆಗ ಪೊಲೀಸರು, ಸ್ಥಳೀಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆ ತಂದಿದ್ದೇವೆಂದು ಸಮಜಾಯಿಷಿ ನೀಡಿದ್ದರು. ಆದರೆ ವಶಕ್ಕೆ ಪಡೆದಿರುವವರು ಅಮಾಯಕರು, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಕತ್ತಲಾವರಿಸಿದರೂ ಪ್ರತಿಭಟನಕಾರರು ಅಲ್ಲಿಂದ ಕದಲದೇ, ಇದ್ದಾಗ ರಾತ್ರಿ 7ರ ವೇಳೆಗೆ ಓರ್ವ ನಾಯಕರನ್ನು ಬಿಡುಗಡೆಗೊಳಿಸಿದ್ದರು. ಇನ್ನಿಬ್ಬರನ್ನು ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸುವುದಾಗಿ ಪೊಲೀಸ್ ಅಧಿಕಾರಿ ಭರವಸೆ ನೀಡಿದ್ದರು. ಆದರೆ ನಂತರವೂ ಅವರನ್ನು ಬಿಡುಗಡೆಗೊಳಿಸುವ ಲಕ್ಷಣ ಕಂಡುಬರಲಿಲ್ಲ. ಅವರಿಬ್ಬರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಸೂಚನೆ ಕಂಡು ಬಂದಾಗ, ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಮತ್ತೆ ಪ್ರತಿಭಟನೆಯನ್ನು ಮುಂದುವರಿಸಲಾಗಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿರುವಾಗ ಪೊಲೀಸರು ಯಾವುದೇ ಸೂಚನೆ ನೀಡದೆ ಯದ್ವಾತದ್ವಾ ಲಾಠಿ ಬೀಸಿದ್ದಾರೆ. ಇದರಿಂದ ಪ್ರತಿಭಟನಕಾರರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಧಾರ್ಮಿಕ ಗುರು ಸೈಯದ್ ಆತೂರು ತಂಙಳ್ ಅವರ ತಲೆಗೆ ಗಂಭೀರ ಗಾಯವಾಗಿದೆ, ಗಾಯದ ತೀವ್ರತೆಯನ್ನು ಗಮನಿಸಿದರೆ ಪೊಲೀಸರು ಲಾಠಿಗೆ ಬದಲಾಗಿ ಯಾವುದೋ ಮಾರಕಾಸ್ತ್ರ ಬಳಸಿರುವ ಬಗ್ಗೆ ಸಂಶಯ ಮೂಡುತ್ತದೆ. ಇದೇ ವೇಳೆ ಲಾಠಿ ಏಟಿಗೆ ಯುವಕನೋರ್ವ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದ. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಮತ್ತು ಸುಮಾರು 40ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರು ಆ್ಯಂಬುಲೆನ್ಸ್ ಮೇಲೆ ಲಾಠಿ ಬೀಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಇದೇ ವೇಳೆ ಆ್ಯಂಬುಲೆನ್ಸ್ ಒಂದನ್ನು ಠಾಣೆ ಬಳಿ ತಡೆ ಹಿಡಿದಿದ್ದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ತೀವ್ರ ಆಡಣೆ ಉಂಟು ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆದಾಗ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವುದು ಪೊಲೀಸರ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಅಮಾಯಕರನ್ನು ಕೇಸಿನಲ್ಲಿ ಸಿಲುಕಿಸುವ ಪ್ರವೃತ್ತಿ ಆತಂಕಕಾರಿಯಾಗಿದೆ. ಘಟನೆಯ ಆರೋಪಿಗಳು ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ಇದೀಗ ಅಮಾಯಕರನ್ನು ಬಂಧಿಸಿ ಪೊಲೀಸರು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ನೆಲದ ಕಾನೂನನ್ನು ಗೌರವಿಸುತ್ತದೆ ಮತ್ತು ಪೊಲೀಸರ ತನಿಖೆಗೂ ಸಹಕರಿಸುತ್ತವೆ. ಆದರೆ ಘಟನೆಗೆ ಸಂಬಂಧಪಡದ ಆಮಾಯಕರನ್ನು ಸಿಲುಕಿಸಿ ಪ್ರಕರಣ ದಾಖಲಿಸಿದ ಅನ್ಯಾಯವನ್ನು ಖಂಡಿಸುತ್ತದೆ ಎಂದು ಎ.ಕೆ.ಅಶ್ರಫ್ ತಿಳಿಸಿದ್ದಾರೆ.
ಲಾಠಿಚಾರ್ಜ್ ಗೆ ಕಾರಣಕರ್ತರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಆದೇಶ ನೀಡಿದ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರಕಾರದ ವತಿಯಿಂದಲೇ ಭರಿಸಬೇಕು, ವಿಚಾರಣೆಯ ನೆಪದಲ್ಲಿ ದಾಖಲಾಗಿರುವ ಆಧಾರರಹಿತ ಕೇಸನ್ನು ಕೂಡಲೇ ಹಿಂಪಡೆಯಬೇಕು. ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಪ್ರತಿಭಟನಕಾರರನ್ನೂ ಬೇಷರತ್ ಆಗಿ ಬಿಡುಗಡೆಗೊಳಿಸಬೇಕು. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಶ್ರಫ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಮುಖಂಡರಾದ ಇಜಾಝ್ ಅಹ್ಮದ್, ಖಾದರ್ ಕುಳಾಯಿ, ಜಾಬಿರ್ ಅರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.







