ಇನಾಂ ರದ್ದತಿ ತಿದ್ದುಪಡಿ ವಿಧೇಯಕ ಸಹಿತ ಎರಡು ವಿಧೇಯಕಗಳ ಮಂಡನೆ
ಬೆಳಗಾವಿ ಚಳಿಗಾಲದ ಅಧಿವೇಶನ

ಬೆಳಗಾವಿ, ಡಿ. 15: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಶಕಗಳಿಂದ ರೈತರು ಉಳುಮೆ ಮಾಡುತ್ತಿರುವವರು(ಇನಾಂ) ಪಹಣಿ ಪಡೆಯುವುದಕ್ಕೆ ಅನುಕೂಲವಾಗಲು ಅರ್ಹರು ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಿಸುವ ಸಂಬಂಧ ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರೆ ಕಾನೂನು(ತಿದ್ದುಪಡಿ), ಭೂ ಕಂದಾಯ (ತಿದ್ದುಪಡಿ) ಸೇರಿ ಮೂರು ವಿಧೇಯಕಗಳನ್ನು ಮಂಡನೆ ಮಾಡಲಾಯಿತು.
ಬುಧವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕ ಮಂಡಿಸಿದರು.
ದಶಕಗಳಿಂದ ಸಾಗುವಳಿ ಮಾಡುತ್ತಿರುವ ಸಾಕಷ್ಟು ರೈತರು ಮಾಹಿತಿ ಇಲ್ಲದ ಕಾರಣ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಅಂತಹವರಿಗೆ ನಿಯಮಾನುಸಾರ ಅರ್ಹ ರೈತರು ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಿಸಲು ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರೆ ಕಾನೂನು(ತಿದ್ದುಪಡಿ) ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಎಕರೆಯಷ್ಟು ಇನಾಂ ಭೂಮಿ ಇದ್ದು, ಹಲವ ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅದಕ್ಕೆ ಸರಿಯಾದ ಪಹಣಿ ಇಲ್ಲದ ಕಾರಣ ರೈತರಿಗೆ ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತಿಲ್ಲ. ಸರಕಾರಿ ಯೋಜನೆಗಳಿಗೆ ಭೂಸ್ವಾಧೀನವಾದರೆ ಪರಿಹಾರ ಸಿಗದೆ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಈ ಉದ್ದೇಶಿತ ವಿಧೇಯಕದಿಂದ ಸಹಕಾರಿಯಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ಸರಕಾರಿ ಸರ್ವೇಯರಗಳು ಆಸ್ತಿಗಳ ವಿಭಜನೆಗೆ ನಕ್ಷೆ (11-ಇ ಸ್ಕೆಚ್), ಭೂಪರಿವರ್ತನೆ ಪೋಡಿ ಮಾಡುವ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ ಸಂಬಂಧ ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಲಾಗಿದೆ.







