ಎಲ್‍ಎಲ್‍ಬಿ ಪರೀಕ್ಷೆ ರದ್ದುಗೊಳಿಸಿ ಆದೇಶಿಸಿದ ಹೈಕೋರ್ಟ್

ಹುಬ್ಬಳ್ಳಿ, ಡಿ.15: ಕರ್ನಾಟಕ ಕಾನೂನು ವಿವಿ ನಡೆಸಲು ಉದ್ದೇಶಿಸಿದ್ದ ಮಧ್ಯಂತರ ಸೆಮಿಸ್ಟರ್ ಭೌತಿಕ ಪರೀಕ್ಷೆಯನ್ನು ಧಾರವಾಡದ ಹೈಕೋರ್ಟ್ ರದ್ದುಗೊಳಿಸಿ ತೀರ್ಪು ಹೊರಡಿಸಿದೆ.
ನ್ಯಾಯಮೂರ್ತಿ ಹೇಮಂತ ಚಂದನಗೌಡ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ, ಕಾನೂನು ಪದವಿಯ 3 ಮತ್ತು 5ನೆ ಸೆಮಿಸ್ಟರ್‍ನ ವಿದ್ಯಾರ್ಥಿಗಳಿಗೆ 50:50 ಅನುಪಾತದ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಭಡ್ತಿ ನೀಡಬೇಕೆಂದು ಸೂಚಿಸಿದೆ.
ಹುಬ್ಬಳ್ಳಿಯ ನವನಗರದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ನಡುವೆ ಈ ವಿಚಾರವಾಗಿ ತೀವ್ರ ಜಟಾಪಟಿ ನಡೆದಿತ್ತು.
ಕಾನೂನು ವಿವಿ ಆವರಣದಲ್ಲಿ ಹಲವಾರು ವಿದ್ಯಾರ್ಥಿಗಳು ಕಳೆದ ಒಂದು ವಾರದಿಂದ ಉಪವಾಸ ಸತ್ಯಾಗ್ರಹ ಕುಳಿತಿದ್ದರು. ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಕಾನೂನು ವಿಶ್ವವಿದ್ಯಾಲಯದ ನಡೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು.
ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಪಕ್ಷದ ನಾಯಕರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದರು. ಆದರೆ, ಕಾನೂನು ವಿವಿ ಕುಲಪತಿ ಪ್ರೊ.ಈಶ್ವರ್ ಭಟ್ ಹಾಗೂ ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದರೆನ್ನುವ ಆರೋಪವೂ ಕೇಳಿಬಂದಿತ್ತು.







