ಜಮ್ಮು-ಕಾಶ್ಮೀರ:ಮೂರು ದಶಕಗಳಲ್ಲಿ ಉಗ್ರಗಾಮಿಗಳಿಂದ 89 ಕಾಶ್ಮೀರಿ ಪಂಡಿತರು ಸೇರಿದಂತೆ 1,724 ಜನರ ಹತ್ಯೆ
ಆರ್ಟಿಐ ಉತ್ತರದಲ್ಲಿ ಬಹಿರಂಗ

PHOTO : PTI
ಶ್ರೀನಗರ,ಡಿ.15: ಜಮ್ಮು-ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ಉಗ್ರಗಾಮಿಗಳು 89 ಕಾಶ್ಮೀರಿ ಪಂಡಿತರು ಸೇರಿದಂತೆ 1,724 ಜನರನ್ನು ಹತ್ಯೆ ಮಾಡಿರುವುದನ್ನು ಆರ್ಟಿಐ ಉತ್ತರವೊಂದು ಬಹಿರಂಗಗೊಳಿಸಿದೆ.
ಹರ್ಯಾಣದ ಪಾನಿಪತ್ ನ ಆರ್ಟಿಐ ಕಾರ್ಯಕರ್ತ ಪಿ.ಪಿ.ಕಪೂರ್ ಅವರ ಆರ್ಟಿಐ ಅರ್ಜಿಗೆ ಶ್ರೀನಗರದ ಪೊಲೀಸ್ ಕೇಂದ್ರಕಚೇರಿಯ ಡಿಎಸ್ಪಿ ನೀಡಿರುವ ಉತ್ತರದಲ್ಲಿ 1990ರಲ್ಲಿ ಉಗ್ರವಾದವು ಹೆಡೆಯೆತ್ತಿದಾಗಿನಿಂದ 89 ಕಾಶ್ಮೀರಿ ಪಂಡಿತರು ಮತ್ತು ಇತರ ಸಮುದಾಯಗಳಿಗೆ ಸೇರಿದ 1,635 ಜನರನ್ನು ಉಗ್ರರು ಹತೈಗೈದಿದ್ದಾರೆ ಎಂದು ತಿಳಿಸಲಾಗಿದೆ.
ಕಣಿವೆಯಲ್ಲಿನ ಪ್ರಕ್ಷುಬ್ಧತೆಯಿಂದಾಗಿ ಕಾಶ್ಮೀರಿ ಪಂಡಿತರು 1990ರಲ್ಲಿ ರಾಜ್ಯದಿಂದ ವಲಸೆ ಹೋಗಿದ್ದರು ಎಂದು ಜಮ್ಮು-ಕಾಶ್ಮೀರ ಪರಿಹಾರ ಮತ್ತು ಪುನರ್ವಸತಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮುಹಮ್ಮದ್ ಫಾರೂಕ್ ಮಲಿಕ್ ತಿಳಿಸಿದ್ದಾರೆ.
ವಲಸಿಗ ಕಾಶ್ಮೀರಿ ಪಂಡಿತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒದಗಿಸಿರುವ ಹಣಕಾಸು ನೆರವು ಸೇರಿದಂತೆ ಸೌಲಭ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರವಾಗಿ ಪ್ರತಿಯೊಬ್ಬ ನೋಂದಾಯಿತ ಕಾಶ್ಮೀರಿ ವಲಸಿಗನಿಗೆ ಮಾಸಿಕ 3,250 ರೂ.ಗಳ ನೆರವನ್ನು ಮತ್ತು 9 ಕೆಜಿ ಅಕ್ಕಿ,2 ಕೆಜಿ ಗೋದಿಹುಡಿ ಮತ್ತು ಒಂದು ಕೆಜಿ ಸಕ್ಕರೆ ಸೇರಿದಂತೆ ಪಡಿತರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಇತರ ಸಮುದಾಯಗಳ ವಲಸಿಗರಿಗೆ ಇಂತಹುದೇ ನೆರವಿನ ಕುರಿತ ಪ್ರಶ್ನೆಗೆ ಪರಿಹಾರ ಮತ್ತು ಪುನರ್ವಸತಿ ಸಂಸ್ಥೆಯು,ಸಮುದಾಯದ ಆಧಾರದಲ್ಲಿ ಹಣಕಾಸನ್ನು ಒದಗಿಸಲಾಗುತ್ತಿಲ್ಲ ಅಥವಾ ವೆಚ್ಚವನ್ನು ಮಾಡಲಾಗುತ್ತಿಲ್ಲ. ಸ್ವೀಕಾರಾರ್ಹ ಘಟಕಗಳ ಮೇಲೆ ಏಕರೂಪದ ವೆಚ್ಚವನ್ನು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ತನ್ನೊಂದಿಗೆ ನೋಂದಾಯಿಸಿಕೊಂಡಿರುವ ವಲಸಿಗರೊಂದಿಗೆ ಮಾತ್ರ ತಾನು ವ್ಯವಹರಿಸುವುದಾಗಿ ಅದು ತಿಳಿಸಿದೆ.
ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಬಲಿಯಾದವರಲ್ಲಿ ಕಾಶ್ಮೀರಿ ಪಂಡಿತರ ಸಂಖ್ಯೆ ಸುಮಾರು ಶೇ.5ರಷ್ಟಿದೆ. ಈವರೆಗೆ ಪುನರ್ವಸತಿ ಕಲ್ಪಿಸಲಾಗಿರುವ ಕಾಶ್ಮೀರಿ ಪಂಡಿತರ ಸಂಖ್ಯೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿಲ್ಲ ಎಂದು ಹೇಳಿದ ಕಪೂರ್,ಬಿಜೆಪಿಯು ಕಾಶ್ಮೀರಿ ಪಂಡಿತರಿಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಮತ್ತು ಅವರ ಹೆಸರಿನಲ್ಲಿ ಮತ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಕಾಶ್ಮೀರದಲ್ಲಿ ಉಗ್ರವಾದ ತಲೆಯೆತ್ತಿದಾಗಿನಿಂದ ಹಿಂದುಗಳು,ಮುಸ್ಲಿಮರು ಮತ್ತು ಸಿಕ್ಖರು ಸೇರಿದಂತೆ 1.54 ಲ.ಜನರು ಕಣಿವೆಯನ್ನು ತೊರೆದಿದ್ದಾರೆ ಎಂದರು. ಅಧಿಕೃತ ದಾಖಲೆಯಂತೆ ಈ ಪೈಕಿ 53,958 ಹಿಂದುಗಳು,11,212 ಮುಸ್ಲಿಮರು,5,013 ಸಿಕ್ಖರು ಸರಕಾರದ ಪರಿಹಾರ ನೀತಿಯಂತೆ ನೆರವು ಪಡೆಯುತ್ತಿದ್ದಾರೆ. 81,448 ಹಿಂದುಗಳು,949 ಮುಸ್ಲಿಮರು ಮತ್ತು 1,542 ಸಿಕ್ಖರು ಯಾವುದೇ ಪರಿಹಾರವನ್ನು ಪಡೆಯುತ್ತಿಲ್ಲ ಎಂದು ಆರ್ಟಿಐ ಉತ್ತರವು ತಿಳಿಸಿದೆ.
1990ರ ದಶಕದಿಂದ ಸುಮಾರು 3,800 ಮತ್ತು ವಿಧಿ 370ರ ರದ್ದತಿಯ ಬಳಿಕ ಪ್ರಧಾನ ಮಂತ್ರಿಗಳ ಪ್ಯಾಕೇಜ್ನಡಿ ಉದ್ಯೋಗಗಳನ್ನು ಪಡೆಯಲು 520 ಕಾಶ್ಮೀರಿ ವಲಸಿಗರು ಕಾಶ್ಮೀರಕ್ಕೆ ಮರಳಿದ್ದಾರೆ. ಈ ವರ್ಷ ಇನ್ನೂ 2,000 ವಲಸಿಗರು ಕಾಶ್ಮೀರಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಕೇಂದ್ರವು ಕಳೆದ ಮಾರ್ಚ್ ನಲ್ಲಿ ಸಂಸತ್ತಿನಲ್ಲಿ ತಿಳಿಸಿತ್ತು.