ಉಪ್ಪಿನಂಗಡಿಯಲ್ಲಿ ಪೊಲೀಸ್ ಲಾಠಿಚಾರ್ಜ್; ಸಂಘಟನೆಗಳ ಖಂಡನೆ
ಮಂಗಳೂರು, ಡಿ.15: ಪಿಎಫ್‌ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಗೆ ವಿವಿಧ ಸಂಘಟನೆಗಳಿಂದ ಖಂಡನೆ ವ್ಯಕ್ತವಾಗಿದೆ.
ಮುಸ್ಲಿಮ್ ಒಕ್ಕೂಟ: ಪ್ರತಿಭಟನಾಕಾರರ ಮೇಲೆ ಉಪ್ಪಿನಂಗಡಿ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ಪೊಲೀಸರ ದೌರ್ಜನ್ಯಕ್ಕೆ ಧರ್ಮಗುರು ಆತೂರ್ ಇಬ್ರಾಹೀಂ ತಂಙಳ್ ಗಂಭೀರ ಗಾಯಗೊಂಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸರು ಶಾಂತಿ ಕಾಪಾಡುವ ಬದಲು ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ತಿಳಿಸಿದ್ದಾರೆ.
ಮುಸ್ಲಿಂ ವರ್ತಕರ ಸಂಘ: ಸಂಘ ಪರಿವಾರದ ಮುಖಂಡರು ದ.ಕ. ಜಿಲ್ಲಾಧಿಕಾರಿ, ಪುಂಜಾಲಕಟ್ಟೆಯ ಎಸ್ಸೈ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದಾಗ ಲಾಠಿ ಎತ್ತಲಾಗದ ಜಿಲ್ಲಾ ಪೊಲೀಸ್ ವ್ಯವಸ್ಥೆಯು ನ್ಯಾಯಯುತ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಪೊಲೀಸರ ತಾರತಮ್ಯ ನೀತಿಯನ್ನು ಕೂಡಾ ಇದು ಎತ್ತಿ ತೋರಿಸುತ್ತಿದೆ. ಕಾನೂನು ಪಾಲಿಸಬೇಕಿದ್ದ, ನ್ಯಾಯ ನೀಡಬೇಕಿದ್ದ ಪೊಲೀಸರು ಸಂಘ ಪರಿವಾರದ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಪೊಲೀಸರ ಈ ನಡೆಯ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ: ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರು ಅಪರಾಧಿಗಳ, ಅಕ್ರಮಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ಕಾನೂನನ್ನು ದುರಪಯೋಗಪಡಿಸಿಕೊಂಡು ನಡೆಸುತ್ತಿರುವ ದೌರ್ಜನ್ಯದ ಮಿತಿ ಮೀರಿದೆ. ಪೊಲೀಸ್ ಕ್ರೌರ್ಯದ ವಿರುದ್ಧ ದೊಡ್ಡ ಮಟ್ಟದ ಜನಾಂದೋಲದ ಅಗತ್ಯವಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.
ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್: ಉಪ್ಪಿನಂಗಡಿಯಲ್ಲಿ ಅಮಾಯಕರ ಅಕ್ರಮ ಬಂಧನವನ್ನು ಪ್ರಶ್ನಿಸಿ ಸಂವಿಧಾನಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾರ್ವಜನಿಕರ ಮೇಲೆ ಪೊಲೀಸರು ಲಾಠಿಜಾರ್ಜ್ ನಡೆಸಿದ್ದಾರೆ. ನಮಾಝಿಗೆ ನೇತೃತ್ವ ನೀಡಿದ ಆತೂರ್ ತಂಙಳ್‌ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಈ ಬಗ್ಗೆ ಜಿಲ್ಲಾ ಎಸ್ಪಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ಇದರ ಅಧ್ಯಕ್ಷ ಅಶ್ರಫ್ ಬದ್ರಿಯಾ ಒತ್ತಾಯಿಸಿದ್ದಾರೆ.







