ರೈತ ಹೋರಾಟ ಮಾದರಿಯಲ್ಲೇ ಕಾರ್ಮಿಕ ಹೋರಾಟಕ್ಕೆ ಚಿಂತನೆ: ಆರ್. ಮಾನಸಯ್ಯ
ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವಂತೆ ಒತ್ತಾಯ
ಬೆಂಗಳೂರು, ಡಿ15: ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದ ಬಂಡವಾಳಶಾಹಿಗಳ ಸೇವೆಯಲ್ಲಿ ನಿರತವಾಗಿರುವ ಮೋದಿ ಸರಕಾರಕ್ಕೆ ರೈತರು ತಕ್ಕ ಪಾಠವನ್ನು ಕಲಿಸಿದ್ದಾರೆ. ಇದರ ಬೆನ್ನಲ್ಲೇ ಕಾರ್ಮಿಕರ 44 ಕಾಯ್ದೆಗಳನ್ನು ರದ್ದುಪಡಿಸಿ ಬಂಡವಾಳಶಾಹಿಗಳ ಪರವಾಗಿ 4 ಕಾರ್ಮಿಕ ಸಂಹಿತೆಗಳನ್ನಾಗಿ ಮಾರ್ಪಾಡು ಮಾಡಿದೆ. ಆದುದರಿಂದ ಈ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯುವಂತೆ ಡಿ.19ರಂದು ಫ್ರೀಡಂ ಪಾರ್ಕ್‍ನಲ್ಲಿ ಕಾರ್ಮಿಕರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಟಿಯುಸಿಐನ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ತಿಳಿಸಿದ್ದಾರೆ.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಕಾರ್ಮಿಕರ ಶತಮಾನಗಳ ಹೋರಾಟದ ಫಲವಾಗಿ ಜಾರಿಗೊಳಿಸಲಾಗಿದ್ದ 44 ಕಾಯ್ದೆಗಳನ್ನು ಕೇಂದ್ರ ಸರಕಾರವು ರದ್ದು ಪಡಿಸಿದ್ದು, ಬಂಡವಾಳಶಾಹಿಗೆ ಅನುಕೂಲವಾಗುವಂತೆ ಕೇವಲ 4 ಕಾರ್ಮಿಕ ಸಂಹಿತೆಗಳಾಗಿ ಬದಲಾವಣೆ ಮಾಡಲಾಗಿದೆ. ಇದು ಕಾರ್ಮಿಕರನ್ನು ಬೀದಿಪಾಲು ಮಾಡುತ್ತದೆ. ಹಾಗಾಗಿ ರೈತರ ಹೋರಾಟವನ್ನು ಮಾದರಿಯಾಗಿ ತೆಗೆದುಕೊಂಡು ದೇಶದ ಕಾರ್ಮಿಕರು ಒಗ್ಗೂಡಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಡಿ.19ರಂದು ನಗರದ ರೈಲ್ವೆ ನಿಲ್ದಾಣದಿಂದ ಕಾರ್ಮಿಕರ ಬೃಹತ್ ಪ್ರತಿಭಟನೆಯೊಂದಿಗೆ ಫ್ರೀಡಂ ಪಾರ್ಕ್‍ಗೆ ತೆರಳಿ, ಅಲ್ಲಿ ಕಾರ್ಮಿಕರ ಬಹಿರಂಗ ಅಧಿವೇಶನವನ್ನು ನಡೆಸಲಾಗುವುದು ಎಂದರು.
ಕರ್ನಾಟಕ ಶ್ರಮಿಕ ಶಕ್ತಿಯ ರಾಜ್ಯಾಧ್ಯಕ್ಷ ವರದರಾಜೇಂದ್ರ ಮಾತನಾಡಿ, ಕಾರ್ಮಿಕರಿಗೆ ಕನಿಷ್ಠ 25,000 ಮಾಸಿಕ ವೇತನವನ್ನು ಕಡಾಯವಾಗಿ ನೀಡಬೇಕು. ಖಾಯಂ ಕೆಲಸವಿರುವ ಕಡೆ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು. ಸಾರ್ವಜನಿಕ ಉದ್ದಿಮೆಗಳ ಮಾರಾಟವನ್ನು ನಿಲ್ಲಿಸಬೇಕು. ಪ್ರತಿ ರಾಜ್ಯದಲ್ಲೂ ವಲಸೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಟಿಯುಸಿಐನ ಸದಸ್ಯ ವಿಕ್ರಂ, ಸುಷ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉತ್ಪಾದನಾ ಕ್ಷೇತ್ರಕ್ಕೆ ರೈತರ ಮತ್ತು ಕಾರ್ಮಿಕರ ಶ್ರಮವನ್ನು ಲೆಕ್ಕಿಸದ ಮೋದಿ ಸರಕಾರ ಬಂಡವಾಳಶಾಹಿಗಳ ಕೈವಶವಾಗಿದೆ. ರೈತರು ಈಗಾಗಲೇ ಸರಕಾರಕ್ಕೆ ತಕ್ಕ ಪಾಠವನ್ನು ಕಲಿಸಿದ್ದಾರೆ. ನಿರ್ದಿಷ್ಟಾವಧಿಯ ಸೇವೆ ಕಾರ್ಮಿಕ ಕಾನೂನನ್ನು ಜಾರಿಗೊಳಿಸಿರುವ 4 ಕಾರ್ಮಿಕ ವಿವಾದಿತ ಸಂಹಿತೆಗಳನ್ನು ಯಾವುದೇ ಚರ್ಚೆಗೆ ಒಳಪಡಿಸದೆ, ಜಾರಿಗೊಳಿಸಿದ ಮೋದಿ ಸರಕಾರದ ವಿರುದ್ಧ ಕಾರ್ಮಿಕರು ಒಗ್ಗೂಡಬೇಕು.
-ಮೋಹನ್ ಕುಮಾರ್, ಸದಸ್ಯ, ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ







